ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದ ಮೂಲೆ ಮೂಲೆಯಿಂದ ಬರುವ ಕೋಟ್ಯಾಂತರ ಜನರಿಗೆ ಆಶ್ರಯ ಕೊಟ್ಟಿದೆ. ಇಲ್ಲಿ ಕೆಲಸ ಹುಡುಕಿ ಬರುವವರಿಗೆ, ಓದಲು ಬರುವ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆ, ಪಿಜಿಗಳೇ ಗತಿ. ಆದರೆ ಈ ಬಾಡಿಗೆ ಮನೆಯ ರೆಂಟ್ ಬಗ್ಗೆ ಕೇಳೋದೇ ಬೇಡ, ದಿನೇ ದಿನೇ ಗಗನಕ್ಕೇರುತ್ತಿದೆ. ಪಿಜಿಗಳೂ ಅಷ್ಟೇ ದುಬಾರಿ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಹೊಸ ಬೆಳವಣಿಗೆ ಶುರುವಾಗಿದೆ. ಒಂದು ಕಾಲದಲ್ಲಿ “ಚಿನ್ನದ ಮೊಟ್ಟೆ ಇಡುವ ಕೋಳಿ” ಅಂತಿದ್ದ ಪಿಜಿ ಬ್ಯುಸಿನೆಸ್ ಈಗ ಸಂಕಷ್ಟಕ್ಕೆ ಸಿಲುಕಿದೆ, ಡಜನ್ಗಟ್ಟಲೆ ಪಿಜಿಗಳು ಬೀಗ ಜಡಿದು ಬಾಗಿಲು ಮುಚ್ಚುತ್ತಿವೆ!
ಬೆಂಗಳೂರಲ್ಲಿ ಸದ್ದಿಲ್ಲದೆ ಶುರುವಾಗಿದೆ ಬಿಕ್ಕಟ್ಟು!
ಇದೇನು ಸಾಮಾನ್ಯ ಸುದ್ದಿಯಲ್ಲ. ಹೂಡಿಕೆ ವಿಶ್ಲೇಷಕ ಹಾರ್ದಿಕ್ ಜೋಶಿ ಅವರ ಪ್ರಕಾರ, ಬೆಂಗಳೂರಿನ ಐಟಿ ಕಾರಿಡಾರ್ಗಳಲ್ಲಿರುವ ನೂರಾರು ಪಿಜಿಗಳು ಮುಚ್ಚುತ್ತಿವೆ. “ಬೆಂಗಳೂರಿನಲ್ಲಿ ಪಿಜಿಗಳನ್ನು ನಡೆಸುತ್ತಿದ್ದ ಹಲವರು ತಮ್ಮ ಪಿಜಿಗಳಿಗೆ ಬೀಗ ಜಡಿದಿದ್ದಾರೆ. ನಗರದಲ್ಲಿ ಸದ್ದಿಲ್ಲದೆ ಒಂದು ವಸತಿ ಬಿಕ್ಕಟ್ಟು ಆರಂಭವಾಗಿದೆ. ಇದು ಸಾವಿರಾರು ಜನರ ಮೇಲೆ ಪರಿಣಾಮ ಬೀರಲಿದೆ” ಅಂತ ಅವರು ಹೇಳಿದ್ದಾರೆ.
ಒಂದು ಕಾಲದಲ್ಲಿ ಒಳ್ಳೆ ಲಾಭ ಕೊಡ್ತಿದ್ದ ರಿಯಲ್ ಎಸ್ಟೇಟ್ ಹೂಡಿಕೆ ಅಂತ ಪರಿಗಣಿಸಲ್ಪಟ್ಟಿದ್ದ ಪಿಜಿ ವ್ಯವಹಾರ ಈಗ ಕುಸಿತ ಕಾಣ್ತಿದೆ. ಹಾರ್ದಿಕ್ ಜೋಶಿ ತಮ್ಮ ಪೋಸ್ಟ್ನಲ್ಲಿ ಹೇಳಿರುವ ಹಾಗೆ, ಮಹದೇವಪುರ ಮತ್ತು ಮಾರತ್ಹಳ್ಳಿಯಂತಹ ಏರಿಯಾಗಳಲ್ಲಿರೋ ಪಿಜಿಗಳು ಶೇಕಡಾ 25ರಷ್ಟು ಆದಾಯ ಕಳೆದುಕೊಳ್ತಿವೆ. ಮಹದೇವಪುರ ಒಂದರಲ್ಲೇ ನೂರಕ್ಕೂ ಹೆಚ್ಚು ಪಿಜಿಗಳು ಈಗಾಗಲೇ ಮುಚ್ಚಿಹೋಗಿವೆ. ಅಂದಾಜಿನ ಪ್ರಕಾರ, ನಗರದ ಐಟಿ ವಲಯಗಳಲ್ಲಿ ಪ್ರತಿದಿನ ಸರಾಸರಿ ಎರಡು ಪಿಜಿಗಳು ಕ್ಲೋಸ್ ಆಗುತ್ತಿವೆಯಂತೆ!
ಐಟಿ ವಲಯದಲ್ಲಿ ವಜಾಗೊಳಿಸುವಿಕೆ: ಇದು ಪ್ರಮುಖ ಕಾರಣ. ಪಿಜಿಗಳಲ್ಲಿ ಹೆಚ್ಚಾಗಿ ವಾಸಿಸೋದು ಯುವ ವೃತ್ತಿಪರರು. ಇತ್ತೀಚಿನ ದಿನಗಳಲ್ಲಿ ಐಟಿ ಕಂಪನಿಗಳಲ್ಲಿ ನಡೀತಿರೋ ಲೇಆಫ್ಗಳು (ವಜಾಗೊಳಿಸುವಿಕೆ) ಹೆಚ್ಚಾಗಿರುವುದರಿಂದ, ಕೆಲಸ ಕಳೆದುಕೊಂಡ ಅನೇಕರು ಪಿಜಿಗಳನ್ನು ತೊರೆದು ತಮ್ಮ ಊರುಗಳಿಗೆ ವಾಪಸ್ ಹೋಗ್ತಿದ್ದಾರೆ. ಇದರಿಂದ ಪಿಜಿಗಳಿಗೆ ಇದ್ದ ಬೇಡಿಕೆ ಕಡಿಮೆಯಾಗಿದೆ.
ಬಿಬಿಎಂಪಿ ಹೊಸ ನಿಯಮಗಳು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಿಜಿಗಳ ಮೇಲೆ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ವ್ಯಾಪಾರ ಪರವಾನಗಿ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ, 40 ಅಡಿಗಿಂತ ಚಿಕ್ಕ ರಸ್ತೆಗಳಲ್ಲಿರುವ ಪಿಜಿಗಳನ್ನು ನಿಷೇಧಿಸಿದೆ. ಇದು ಬಜೆಟ್ ಪಿಜಿಗಳಿಗೆ, ವಿಶೇಷವಾಗಿ ಹಳೆಯ ಮತ್ತು ಜನನಿಬಿಡ ಪ್ರದೇಶಗಳಲ್ಲಿರುವ ಪಿಜಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಬೆಂಗಳೂರು ಪಿಜಿ ಮಾಲೀಕರ ಸಂಘದ ಕಾರ್ಯದರ್ಶಿ ಸುಖಿ ಸಿಯೋ ಅವರ ಪ್ರಕಾರ, ಬಿಬಿಎಂಪಿ ನಿಯಮಗಳಿಂದಾಗಿ ಈಗಾಗಲೇ 200-300ಕ್ಕೂ ಹೆಚ್ಚು ಪಿಜಿಗಳು ಮುಚ್ಚಲ್ಪಟ್ಟಿವೆಯಂತೆ.
ದುಬಾರಿ ನಿರ್ವಹಣಾ ವೆಚ್ಚ: ವಿದ್ಯುತ್ ಮತ್ತು ನೀರಿನ ಶುಲ್ಕಗಳು ಈಗಾಗಲೇ ಗಣನೀಯವಾಗಿ ಹೆಚ್ಚಾಗಿವೆ. ಪಿಜಿ ನಿರ್ವಾಹಕರಿಗೆ, ಬಾಡಿಗೆಯನ್ನು ಹೆಚ್ಚಿಸದೆ ಪಿಜಿ ನಡೆಸೋದು ಕಷ್ಟವಾಗುತ್ತಿದೆ. ಹೆಚ್ಚಿದ ವೆಚ್ಚಗಳು ಪಿಜಿ ಮಾಲೀಕರ ಲಾಭವನ್ನು ನುಂಗುತ್ತಿವೆ. ಜೋಶಿ ಅವರ ಪ್ರಕಾರ, ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಬೆಂಗಳೂರಿನಲ್ಲಿ ಅಧಿಕೃತವಾಗಿ ಕೇವಲ 2,500 ಪಿಜಿಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಇವುಗಳ ಸ್ಥಿತಿಯೂ ಅಷ್ಟೇನೂ ಚೆನ್ನಾಗಿಲ್ಲ. ವಿಪರ್ಯಾಸವೆಂದರೆ, ಈ ಪಿಜಿಗಳನ್ನು “ಕೋಳಿ ಗೂಡುಗಳು,” “ಅಧಿಕ ಬೆಲೆ,” “ಜನದಟ್ಟಣೆ,” “ಕಳಪೆ ನಿರ್ವಹಣೆ” ಅಂತ ಜನ ಟೀಕಿಸುತ್ತಾರೆ.
ಹೆಚ್ಚಿನ ಪಿಜಿ ಮಾಲೀಕರು ಹೇಳುವುದೇನೆಂದರೆ, ಒಮ್ಮೆ ಲಾಭದಾಯಕವಾಗಿದ್ದ ಅವರ ವ್ಯವಹಾರ ಇಂದು 20-30% ನಷ್ಟದಲ್ಲಿ ನಡೆಯುತ್ತಿದೆ. ಇದು ಪಿಜಿ ಮಾಲೀಕರ ಪಾಲಿನ ಮಾತ್ರ ಸಮಸ್ಯೆ ಅಲ್ಲ, ಬೆಂಗಳೂರಿಗೆ ಬಂದು ನೆಲೆಸಲು ಪ್ರಯತ್ನಿಸುತ್ತಿರುವ ಸಾವಿರಾರು ಜನರಿಗೂ ಭವಿಷ್ಯದಲ್ಲಿ ವಸತಿ ಸಮಸ್ಯೆ ಹೆಚ್ಚಾಗುವುದರ ಭಯವಿದೆ.


