BBMP
Loading ...

Byregowda

Greater Bengaluru News9 : ನಾಯಿಗಳ ಸಂತಾನಹರಣ ಕಾರ್ಯಕ್ರಮ ಮತ್ತು ನಗರ ಹಸಿರೀಕರಣ ಯೋಜನೆಗಳ ಅಂಕಿಅಂಶಗಳ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಜಿಬಿಎ ಸಭೆಯಲ್ಲಿ ಸರಿಯಾದ ಡೇಟಾ ಇಲ್ಲದೆ ಅಧಿಕಾರಿಗಳು ಹಾಜರಾದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದರೂ ಕನಿಷ್ಠ ಮಾಹಿತಿಯೂ ಇಲ್ಲದೆ ಸಭೆಗೆ ಬಂದಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

“20 ವರ್ಷಗಳಿಂದ ಸಂತಾನಹರಣ ಕಾರ್ಯಕ್ರಮ ನಡೆಯುತ್ತಿದ್ದರೂ ನಾಯಿಗಳ ಸಂಖ್ಯೆ ಯಾಕೆ ಕಡಿಮೆಯಾಗಿಲ್ಲ? ನಾನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀನಾ?” ಎಂದು ಅಧಿಕಾರಿಗಳ ಅಸ್ಪಷ್ಟ ಉತ್ತರಗಳಿಗೆ ಸಚಿವರು ಕಿಡಿಕಾರಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿ ನಾಯಿಗಳ ಸಮಸ್ಯೆ ಕಳೆದ 50 ವರ್ಷಗಳಿಂದ ಮುಂದುವರಿದಿದೆ ಎಂದು ಹೇಳಿದರು. 2000ನೇ ಇಸವಿಯಿಂದಲೂ ಸಂತಾನಹರಣ ಚಿಕಿತ್ಸೆ ನಡೆಯುತ್ತಿದ್ದು, ಬಿಬಿಎಂಪಿ ಅಂಕಿಅಂಶಗಳ ಪ್ರಕಾರ 8.80 ಲಕ್ಷ ನಾಯಿಗಳಿಗೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.

2019ರ ಸರ್ವೆ ಪ್ರಕಾರ 3.10 ಲಕ್ಷ ಹಾಗೂ 2023ರ ಸರ್ವೆ ಪ್ರಕಾರ 2.79 ಲಕ್ಷ ಬೀದಿ ನಾಯಿಗಳು ನಗರದಲ್ಲಿ ಇವೆ ಎಂದು ಸಚಿವರು ಮಾಹಿತಿ ನೀಡಿದರು. ಆದರೆ ಖರ್ಚು ಮತ್ತು ಚಿಕಿತ್ಸೆ ಸಂಖ್ಯೆಯ ನಡುವೆ ಸ್ಪಷ್ಟ ವ್ಯತ್ಯಾಸ ಕಂಡುಬಂದಿದ್ದು, ಕಳೆದ 5 ವರ್ಷಗಳಲ್ಲಿ ಈ ಯೋಜನೆಗೆ 42 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಅವರು ಹೇಳಿದರು.

ಸಂತಾನಹರಣ ಚಿಕಿತ್ಸೆಯನ್ನು ದ್ವಿಗುಣಗೊಳಿಸಲು ಸೂಚನೆ ನೀಡಿರುವ ಸಚಿವರು, ಅಗತ್ಯವಿದ್ದರೆ ಹೊರಗುತ್ತಿಗೆ ಸಂಸ್ಥೆಗಳ ಸೇವೆ ಬಳಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದೇ ವೇಳೆ ನಗರ ಹಸಿರೀಕರಣ ಯೋಜನೆಯ ಕುರಿತು ಮಾತನಾಡಿದ ಸಚಿವರು, 2008ರಿಂದ 20 ಲಕ್ಷ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳಲಾಗುತ್ತಿದ್ದು, ಆದರೆ ಮರಗಣತಿಯಲ್ಲಿ ಕೇವಲ 9 ಲಕ್ಷ ಮರಗಳಷ್ಟೇ ಇರುವುದಾಗಿ ತಿಳಿಸಿದರು.

“ನೆಟ್ಟ ಗಿಡಗಳು ಎಲ್ಲಿಗೆ ಹೋದವು?” ಎಂದು ಪ್ರಶ್ನಿಸಿದ ಅವರು, ಪ್ರತಿ ಗಿಡಕ್ಕೆ ಸರಾಸರಿ 2,300 ರಿಂದ 3,300 ರೂಪಾಯಿ ವೆಚ್ಚವಾಗುತ್ತಿದೆ ಎಂದು ವಿವರಿಸಿದರು. ಆದರೆ ನೆಟ್ಟ ಗಿಡಗಳ ನೈಜ ಸ್ಥಿತಿ ಸ್ಥಳದಲ್ಲಿ ಕಾಣಿಸದಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ನಗರ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ನಿರ್ವಹಣೆ ಅಗತ್ಯವಿದೆ ಎಂದು ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *