BBMP
Loading ...

DKS

Greater Bengaluru News9: ರಾಜ್ಯ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಸಮರ, ನಾಯಕತ್ವ ಬದಲಾವಣೆ ವಿಚಾರಗಳು ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೆಲ ನಾಯಕರ ಮಾತುಗಳು ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅತ್ಯಂತ ಆಪ್ತರೆನಿಸಿಕೊಂಡ ಶಾಸಕರಾದ ಇಕ್ಬಾಲ್ ಹುಸೇನ್ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಮಾಧ್ಯಮಗಳ ಮುಂದೆ ಡಿಕೆಶಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

ತಡರಾತ್ರಿ ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದ ಶಾಸಕರಲ್ಲಿ ಕೆಲವರು ಡಿಸಿಎಂ ಡಿ.ಕೆ ಶಿವಕುಮಾರ್​ ಮುಖ್ಯಮಂತ್ರಿ ಆಗುವ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ನವೆಂಬರ್​ ಕ್ರಾಂತಿ, ಸಂಕ್ರಾಂತಿಯಲ್ಲಿ ಕ್ರಾಂತಿ ಎಂಬ ವಿಚಾರ ಚರ್ಚೆಯಾಗುತ್ತಿದ್ದಂತೆ ಶಾಸಕರು ಮತ್ತೆ ಮತ್ತೆ ಬ್ಯಾಟಿಂಗ್​ ಮಾಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್​ ಅತ್ಯಂತ ಆಪ್ತರಾದ ಶಾಸಕ ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗುವ ಬಗ್ಗೆ ಬ್ಯಾಟಿಂಗ್​ ಮಾಡಿದ್ದಾರೆ. ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿಯುತ್ತಲೇ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಎಂಎಲ್ಎ ಆಗಿಲ್ಲವಾ? ಅದೇ ರೀತಿ ಡಿ.ಕೆ. ಶಿವಕುಮಾರ್ ಹಣೆಯಲ್ಲಿ ಬರೆದಿದೆ, ಅವರು ಸಿಎಂ ಆಗ್ತಾರೆ. ನಿನ್ನೆ ನಾವು 55 ಶಾಸಕರು ಡಿನ್ನರ್‌ಗೆ ಸೇರಿದ್ವಿ. ಊಟ ಮಾಡಿದ್ದೇವೆ ಅಷ್ಟೇ, ಆದರೆ ಡಿಕೆಶಿ ಸಿಎಂ ಆಗ್ತಾರೆ ಅನ್ನೋದು ನಿಶ್ಚಿತ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಯಾರಿಗೆ ಯಾವಾಗ ಜ್ಞಾನೋದಯ ಆಗುತ್ತೋ ಗೊತ್ತಿಲ್ಲ. ಫಲಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಇಕ್ಬಾಲ್​ ಹುಸೇನ್​ ಹೇಳಿದ್ದು, ನಿನ್ನೆ ಬೆಳಗ್ಗೆ ಯತೀಂದ್ರ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆಗೆ ನೇರ ತಿರುಗೇಟು ನೀಡಿದಂತಿದೆ. ಹೈಕಮಾಂಡ್ ಈಗ ಸುಮ್ಮನಿದೆ ಏಕೆಂದರೆ ಅಧಿವೇಶನ ನಡೀತಿದೆ. ಅಧಿವೇಶನ ಮುಗಿಯಲಿ, ತೀರ್ಮಾನ ಆಗುತ್ತೆ ಎಂದು ಸಂಚಲನ ಹೇಳಿಕೆ ನೀಡಿದ್ದಾರೆ.

ಇತ್ತ ಬಿಜೆಪಿ ಉಚ್ಚಾಟಿತ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕೂಡ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ. ಡಿ.ಕೆ. ಶಿವಕುಮಾರ್ ಯಾಕ್ರೀ ಸಿಎಂ ಆಗಬಾರದು…?, ಪಕ್ಷ ಕಟ್ಟಿದ್ದಾರೆ, ಶ್ರಮ ಪಟ್ಟಿದ್ದಾರೆ, ಕೂಲಿ ಕೇಳ್ತಿದ್ದಾರೆ. ನನ್ನ ಹಣೆಯಲ್ಲಿ ಬಿಜೆಪಿಗೆ ಹೋಗಿ ಮಂತ್ರಿ ಆಗಬೇಕು ಅಂತಾ ಇತ್ತು. ಅದೇ ರೀತಿ ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗುತ್ತಾರೆ. ಅವರು ಯಾಕೆ ಬಿಜೆಪಿಗೆ ಹೋಗಿ ಸಿಎಂ ಆಗಬೇಕು?. ನಿನ್ನೆ ಡಿನ್ನರ್‌ಗೆ ಕರೆದಿದ್ರು, ನಾನು ಹೋಗಿದ್ದೆ. ಸುಮಾರು 70 ಜನ ಶಾಸಕರು ಇದ್ದರು ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ನಿನ್ನೆ ರಾತ್ರಿ ಪ್ರವೀಣ್ ದೊಡ್ಡಣ್ಣನವರ್ ತೋಟದ ಮನೆಯಲ್ಲಿ 55–70 ಶಾಸಕರನ್ನು ಒಟ್ಟುಗೂಡಿಸಿದ್ದರು. ಬಿಜೆಪಿ ಉಚ್ಚಾಟಿತರಾದ ಸೋಮಶೇಖರ್, ಶಿವರಾಂ ಹೆಬ್ಬಾರ್ ಮತ್ತು ಹ್ಯಾರಿಸ್, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಡಿನ್ನರ್ ಮೀಟಿಂಗ್ ನಂತರವೇ ಇಕ್ಬಾಲ್ ಹುಸೇನ್ ಮತ್ತು ಎಸ್​.ಟಿ ಸೋಮಶೇಖರ್ ಮಾಧ್ಯಮಗಳ ಮುಂದೆ ಗಟ್ಟಿಯಾಗಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *