ಇತ್ತೀಚೆಗೆ ಮುಕ್ತಾಯವಾದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ “ನಮಸ್ತೆ ಸದಾ ವತ್ಸಲೇ” ಹಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ, ರಾಷ್ಟ್ರಮಟ್ಟದಲ್ಲೂ ಭಾರಿ ಸುದ್ದಿಯಾಯಿತು. ಅಲ್ಲದೆ, ಪರ-ವಿರೋಧ ಚರ್ಚೆಯು ನಡೆಯಿತು. ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ತದ್ವಿರುದ್ಧವಾಗಿರುವ ಕಾಂಗ್ರೆಸ್ ಪಕ್ಷದ ನಾಯಕನಿಂದಲೇ ಈ ಹಾಡು ಕೇಳಿದ್ದು ಅನೇಕರ ಹುಬ್ಬೇರಿಸಿತ್ತು. ಆದರೆ, ಕಾಂಗ್ರೆಸ್ ಒಳಗೆ ಅಸಮಾಧಾನದ ಹೊಗೆ ಭುಗಿಲೆದ್ದಿತು. ಅನೇಕ ಮಂದಿ ಡಿಕೆಶಿಯನ್ನು ಖಂಡಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಸಂಘದ ಗೀತೆ ಹಾಡಿದ್ದಕ್ಕೆ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದರು. ಎಲ್ಲರ ಒತ್ತಡಕ್ಕೆ ಮಣಿದು ಕೊನೆಗೂ ಡಿಕೆಶಿ ಅವರು ಕ್ಷಮೆಯಾಚಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಲಾಯಲ್ ಎಂದು ಹೇಳುತ್ತಲೇ ಕ್ಷಮೆ ಕೇಳಿದರು. ನನ್ನ ಜೀವನ ನಿಮ್ಮಗಳ ಜೀವನಕ್ಕೆ ಅಡಿಪಾಯ ಆಗಬೇಕು. ಇಲ್ಲಿ ಯಾರ ಮನಸ್ಸನ್ನು ನಾನು ನೋಯಿಸಿಲ್ಲ. ನಿಮಗೆ ಕ್ಷಮೆ ಬೇಕಿದ್ದರೆ, ನಾನು ತಪ್ಪು ಮಾಡಿದ್ದೇನೆಂದು ಅನಿಸಿದರೆ, ನಾನು ತಪ್ಪು ಮಾಡದೇ ಇದ್ದರೂ ಕ್ಷಮೆ ಕೋರುತ್ತೇನೆ. ನಾನು ಹುಟ್ಟು ಕಾಂಗ್ರೆಸ್ಸಿಗ ಮತ್ತು ಸಾಯೋದು ಕೂಡ ಕಾಂಗ್ರೆಸ್ನಲ್ಲೇ ಎಂದು ಡಿಕೆಶಿ ಹೇಳಿದರು.
ಮಾತು ಮುಂದುವರಿಸಿದ ಡಿಕೆಶಿ, ನನ್ನ ಧರ್ಮವನ್ನು ನಾನು ಬಿಡುವವನಲ್ಲ. ಕ್ರಿಶ್ವಿಯನ್, ಮುಸ್ಲಿಂ ಹಾಗೂ ಜೈನರ ಬಗ್ಗೆ ನನಗೆ ನಂಬಿಕೆಯಿದೆ. ಧರ್ಮ ಯಾವುದಾದರೂ ಭಕ್ತಿ ಒಂದೇ. ಹಾಗೇ ಕರ್ಮ ಹಲವು ಆದರೂ ನಿಷ್ಠೆ ಒಂದೇ. ಸೂರ್ಯ ಹಾಗೂ ಚಂದ್ರನ ಬೆಳಕಿಗೆ ಯಾವುದೇ ಭೇದವಿಲ್ಲ. ಪೈಗಂಬರ್ ತತ್ವದ ಬಗ್ಗೆ ನಿಷ್ಠೆ ಉಳ್ಳವನು ನಾನು. ಎಲ್ಲ ಶ್ಲೋಕಗಳನ್ನ ನಾನು ಇರುವಲ್ಲೇ ಹೇಳುವವನು. ಹೀಗಾಗಿ ಇದರಲ್ಲಿ ಯಾರು ರಾಜಕಾರಣ ಮಾಡಬೇಡಿ, ನಾನು ನನ್ನ ಡ್ಯೂಟಿ ಮಾಡುತ್ತೇನೆ ಎಂದರು.
ಮಾಧ್ಯಮದವರು ನನ್ನನ್ನು ಬೆಳೆಸಿದ್ದೀರಿ, ಟೀಕೆಯನ್ನೂ ಮಾಡಿದ್ದೀರಿ ಮತ್ತು ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದ್ದೀರಿ ಇದಕ್ಕೆ ನಾನು ತೆರೆ ಎಳೆಯುವ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಆರ್‌ಎಸ್‌ಎಸ್ ಗೀತೆ ವಿವಾದಕ್ಕೆ ಡಿಕೆಶಿ ತೆರೆ ಎಳೆದರು.
ಆರ್‌ಎಸ್‌ಎಸ್ ಗೀತೆ ಹಾಡಿದ್ದರ ಬಗ್ಗೆ ರಾಹುಲ್ ಗಾಂಧಿ ಏನಾದರೂ ಕೇಳಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನನ್ನನ್ನು ಯಾರೂ ಕೇಳಿಲ್ಲ. ಅವರು ಬೇರೆಯವರಿಂದ ತಿಳಿದುಕೊಂಡಿರಬಹುದು. ಪಕ್ಷದಲ್ಲಿ ಹಿರಿಯ ನಾಯಕರಿದ್ದು, ಅವರು ನನ್ನನ್ನ ಗೈಡ್ ಮಾಡ್ತಿದ್ದಾರೆ. ನಾನೇನು ಆರ್‌ಎಸ್‌ಎಸ್ ಹೊಗಳಿದ್ದೇನಾ? ಗೀತೆಯಲ್ಲಿ ಏನಿದೆ ಅದನ್ನು ಮಾತ್ರ ನಾನು ಹೇಳಿದೆ ಎಂದು ಡಿಕೆಶಿ ತಿಳಿಸಿದರು.
ನಾನೊಬ್ಬ ಸೆಕ್ಯುಲರ್ ಮನುಷ್ಯ. ನನಗೆ ಜಾತಿಯ ಬಗ್ಗೆ ನಂಬಿಕೆ ಇಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ನಮ್ಮ ಗಂಗಾಧರ ಅಜ್ಜನವರ ಮಾತು ಎಂದರು. ಇದೇ ಸಂದರ್ಭದಲ್ಲಿ ರಾಜಣ್ಣ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಅವರು ಯಾರಿಗೆ ಅಡ್ವೈಸ್ ಕೊಡಬೇಕೋ ಕೊಡಲಿ, ನಾನು ಎಲ್ಲರಿಗೂ ವಿಶ್ ಮಾಡುತ್ತೇನೆ ಎನ್ನುವ ಮೂಲಕ ರಾಜಣ್ಣ ಹೇಳಿಕೆಗೆ ಡಿಕೆಶಿ ಸೈಲೆಂಟ್ ಆದರು.
ವಿವಾದದ ಹಿನ್ನೆಲೆ ಏನು?
ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು 2025, ಆಗಸ್ಟ್ 21 ವಿಧಾನಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಪ್ರಾರ್ಥನಾ ಗೀತೆ ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ’ಯನ್ನು ಹಾಡಿದರು. ಇದು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಆರ್. ಅಶೋಕ್ ಅವರು ಶಿವಕುಮಾರ್ ಅವರ ಆರ್‌ಎಸ್‌ಎಸ್‌ನೊಂದಿಗಿನ ಹಿಂದಿನ ಸಂಪರ್ಕವನ್ನು ಉಲ್ಲೇಖಿಸಿ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶಿವಕುಮಾರ್ ಗೀತೆಯನ್ನು ಹಾಡಿದರು. ಇದನ್ನು ಬಿಜೆಪಿ ಶಾಸಕರು ಇದನ್ನು ಸ್ವಾಗತಿಸಿದರೆ, ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯ ಉಂಟಾಯಿತು. ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಶಿವಕುಮಾರ್ ಹಾಡಿದ್ದನ್ನು ಖಂಡಿಸಿ, ಆರ್‌ಎಸ್‌ಎಸ್‌ನ ಇತಿಹಾಸ ಮತ್ತು ಗಾಂಧೀಜಿಯವರ ಹತ್ಯೆಯೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಶಿವಕುಮಾರ್‌ಗೆ “ವಿಶೇಷ ನಿಯಮಗಳು” ಇವೆ ಎಂದು ವ್ಯಂಗ್ಯವಾಡಿದರು. ಇತ್ತ ಬಿಜೆಪಿ ಶಾಸಕರು ಶಿವಕುಮಾರ್ ಹಾಡಿದ್ದನ್ನು ಸ್ವಾಗತಿಸಿದರು. ಅಂತಿಮವಾಗಿ ಡಿಕೆಶಿ ಅವರು ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ.


