BBMP
Loading ...

Bengaluru Karaga

ಬೆಂಗಳೂರು: ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು 2025ರ ಕರಗ ಶಕ್ತ್ಯೋತ್ಸವ ನಡೆಯಲಿದೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸತೀಶ್ ರಿಂದ ದಿನಾಂಕ ಘೋಷಣೆ ಮಾಡಿದ್ದು, ಏಪ್ರಿಲ್ 4 ರಿಂದ 14 ರ ವರೆಗೆ ಹನ್ನೊಂದು ದಿನಗಳ ಕಾಲ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಈ ಬಾರಿ ಕರಗ ಹೊರುವವರು ಯಾರು?
ಈಗಾಗಲೇ 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿರುವ ಎ.ಜ್ಞಾನೇಂದ್ರ ಅವರೇ ಈ ಬಾರಿಯೂ ಕರಗ ಹೊರಲಿದ್ದಾರೆ. ಇದರೊಂದಿಗೆ ಈ ವರ್ಷ ದ್ರೌಪದಿ ದೇವಿ ಕರಗ ಹೊತ್ತರೆ ಹದಿನೈದು ಬಾರಿ ಕರಗ ಹೊತ್ತಂತೆ ಆಗಲಿದೆ. ನಿನ್ನೆ ರಾತ್ರಿ ಮುಜರಾಯಿ ಇಲಾಖೆ ಹಾಗೂ ಕರಗ ಆಡಳಿತ ಮಂಡಳಿಯಿಂದ ನಡೆದ ಸಭೆಯಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ.

ಬಿಬಿಎಂಪಿ ವಿರುದ್ಧ ಆಡಳಿತ ಮಂಡಲಿ ಗರಂ
ಇದರ ನಡುವೆಯೇ ಬಿಬಿಎಂಪಿ ವಿರುದ್ದ ಧರ್ಮರಾಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಗರಂ ಆಗಿದ್ದು, ಎಸ್ ಪಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಕರಗೋತ್ಸವಕ್ಕೆ ನಾವು ದಿನಾಂಕ ನಿಗದಿ ಮಾಡಿದ್ದೇವೆ. ಆದರೆ ಇನ್ನೂ ಕೂಡ ಕಾಮಗಾರಿ ಬಿಬಿಎಂಪಿ ಪೂರ್ಣ ಮಾಡಿಲ್ಲ. ಇದರಿಂದಾಗಿ ಏನಾದರು ಅನಾಹುತಗಳಾದರೆ ಅದಕ್ಕೆ ಬಿಬಿಎಂಪಿಯೇ ನೇರ ಹೊಣೆ. ಈ ಸಾಲಿನ‌ ಕರಗಕ್ಕೆ ಇನ್ನೂ 2 ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಬಿಬಿಎಂಪಿ ಕಾಮಗಾರಿ ಶುರು ಮಾಡಿದ 2 ತಿಂಗಳಾಗಿದೆ, ಇನ್ನೂ ಕೂಡ ಪಾಲಿಕೆ ಕಾಮಗಾರಿ ಪೂರ್ಣ ಮಾಡಿಲ್ಲ. ಹೀಗಾಗಿ ಈ ಬಾರಿಯ ಕರಗಕ್ಕೆ ಪಾಲಿಕೆ ಕಾಮಗಾರಿ ಅಡಚಣೆ ಉಂಟು ಮಾಡಲಿದೆ ಎಂದು ಧರ್ಮರಾಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಕರಗದ ಅರ್ಥ
ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರ ಒಂದೊಂದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ.

ಬೆಂಗಳೂರು ಕರಗ ವಿಶೇಷತೆ
ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು 8 ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ.

ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇಗುಲದಿಂದ ಹೊರ ಬರ್ತಾರೆ. ಅನೇಕ ದೇವಸ್ಥಾನಗಳಿಂದ ಕರಗ ವೇಷಧಾರಿಗಳು ಈ ದೇಗುಲಕ್ಕೆ ಬರ್ತಾರೆ. ಕಾಟನ್‌ಪೇಟೆಯ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಕಗರ ತೆರಳುತ್ತೆ. ಮಸ್ತಾನ್‌ ಸಾಬ್‌ ದರ್ಗಾದಲ್ಲಿ ಧೂಪಾರತಿ ನಂತರ ನಗರ ಪ್ರದಕ್ಷಿಣೆ ಮಾಡಲಾಗುತ್ತದೆ.

ಸಾಲ ಕೊಟ್ಟು ಕಿರುಕುಳ ನೀಡುತ್ತಿರುವ ಮೈಕ್ರೊಫೈನಾನ್ಸ್​ಗೆ ಬ್ರೇಕ್​ ಹಾಕಲು ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅಸ್ತು!

Leave a Reply

Your email address will not be published. Required fields are marked *