ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಭಾನುವಾರ ರಾತ್ರಿಯಿಡೀ ಸುರಿದ ಭಾರಿ ಮಳೆ, ರಾಜಧಾನಿ ಬೆಂಗಳೂರಲ್ಲಿ ದಾಖಲೆಯ ಜತೆಗೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಸಾಲದು ಎಂಬಂತೆ ಸೋಮವಾರ ಕೂಡ ರಾತ್ರಿಯಿಡೀ ಮಳೆ ಸುರಿದಿದೆ. ಹೇಳಬೇಕೆಂದರೆ, ಇನ್ನು ಸುರಿಯುತ್ತಲೇ ಇದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಯಾವಾಗ ನಿಲ್ಲತ್ತದೆ ಎಂದು ಎದುರು ನೋಡುತ್ತಿದ್ದಾರೆ. ಬೆಂಗಳೂರು ಮಂದಿಯಂತೂ ಸಾಕಪ್ಪ ಈ ಮಳೆ ಸಹವಾಸ ಎನ್ನುತ್ತಿದ್ದಾರೆ. ಇದರ ಮಧ್ಯೆ ಈಗಾಗಲೇ ಮಳೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ಪಂದ್ಯವೊಂದು ರದ್ದಾಗಿದೆ. ಇದೀಗ ಎರಡನೇ ಪಂದ್ಯಕ್ಕೂ ಮಳೆ ಭೀತಿ ಇರುವುದಿಂದ ಕ್ರೀಡಾಭಿಮಾನಿಗಳು ಕೂಡ ಯಾವಾಗ ಮಳೆ ನಿಲ್ಲುತ್ತದೆ ಎಂದು ಕಾಯುತ್ತಿದ್ದಾರೆ. ಹಾಗಾದರೆ, ಇನ್ನು ಎಷ್ಟು ದಿನ ರಾಜ್ಯದಲ್ಲಿ ಮಳೆಯಾಗಬಹುದು? ಹವಾಮಾನ ಇಲಾಖೆ ಏನು ಹೇಳಿದೆ ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.
ಹವಾಮಾನ ಇಲಾಖೆ ವರದಿಯ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮುಂದಿನ 3 ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಅದರಲ್ಲೂ ಬುಧವಾರ (ಮೇ 21) ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಸೈಕ್ಲೋನ್ ಪ್ರಭಾವದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮೇ 21ರಿಂದ ಮುಂದಿನ 2 ದಿನ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲಾಖೆ, ರೆಡ್ ಅಲರ್ಟ್ ಕೊಟ್ಟಿದೆ.
ಧಾರವಾಡ, ಹಾವೇರಿ, ಕೊಡಗು, ಹಾಸನದಲ್ಲಿ ಮುಂದಿನ 2 ದಿನ ಬಿರುಸಾಗಿ ವರ್ಷಧಾರೆಯಾಗುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲಿಯ್ಲೂ ಮೇ 22ರಂದು ಆರೆಂಜ್ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಗದಗ, ಕೊಪ್ಪಳ ಮತ್ತು ವಿಜಯಪುರದಲ್ಲಿ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ.
ಇನ್ನು ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ. ನಾಳೆ ಸೈಕ್ಲೋನ್ ಆರ್ಭಟ ಸಾಧ್ಯತೆ ಇದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ತಲೆದೂರುವ ಸಾಧ್ಯತೆ ಇದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆದಷ್ಟು ಮನೆಯಿಂದ ಹೊರಬರುವುದನ್ನು ತಪ್ಪಿಸಿ ಮತ್ತು ವಿದ್ಯುತ್ ಕಂಬಗಳನ್ನು ಸ್ಪರ್ಶಿಸಬೇಡಿ. ಇನ್ನು ಯಾವುದೇ ಕಾರಣಕ್ಕೂ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲಬೇಡಿ. ರಸ್ತೆಗಳಲ್ಲಿ ಸಂಚರಿಸುವಾಗ ಆದಷ್ಟು ಜಾಗರೂಕರಾಗಿರಿ.
ಆರ್ಸಿಬಿ ಪಂದ್ಯಕ್ಕೂ ಮಳೆ ಭೀತಿ
ಮೇ 23ರಂದು ಆರ್ಸಿಬಿ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ. ಮೇ 17 ರಂದು ಕೆಕೆಆರ್ ಮತ್ತು ಆರ್ಸಿಬಿ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಲೇ ರದ್ದಾಯಿತು. ಇದರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಯಿತು. ಇದೀಗ ಇನ್ನು ಮೂರು ದಿನ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಮೇ 23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಇದೆ. ಹೀಗಾಗಿ ಅಭಿಮಾನಿಗಳು ಮಳೆಯಾಗದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.
ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್


