Greater Bengaluru News9 : ರಾಜ್ಯದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸೋಮವಾರ (ಆಗಸ್ಟ್ 3) ನಡೆಯುವುದು ಬಹುತೇಕ ಖಚಿತವಾಗಿದೆ. 18 ರಿಂದ 20 ಹೊಸ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಇನ್ನೊಂದೆಡೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 20 ಶಾಸಕರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆಯ ಪಟ್ಟಿ ಸಿದ್ಧವಾಗಿದ್ದರೂ, ಹೈಕಮಾಂಡ್ನಿಂದ ಹಸಿರು ನಿಶಾನೆ ಸಿಕ್ಕ ತಕ್ಷಣವೇ ಸರ್ಕಾರದ ಕಡೆಯಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಭಾನುವಾರ ನಗರಕ್ಕೆ ಆಗಮಿಸಲಿದ್ದಾರೆ. ಮತ್ತೊಂದು ಸತ್ತಿನ ಚರ್ಚೆ ಬಳಿಕ ಪಟ್ಟಿ ಅಂತಿಮವಾಗಲಿದೆ.
ಆಡಳಿತಾರೂಢ ಕಾಂಗ್ರೆಸ್ನಲ್ಲಿ ಹೆಚ್ಚುತ್ತಿರುವ ಶಾಸಕರ ಆಕಾಂಕ್ಷೆಗಳನ್ನು ಈಡೇರಿಸುವುದು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಈ ಸಂಪುಟ ವಿಸ್ತರಣೆಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗದ ಹಲವು ಜಿಲ್ಲೆಗಳ ಶಾಸಕರಿಗೆ ಈ ಬಾರಿ ಮಂತ್ರಿಗಿರಿ ಸಿಗುವುದು ಬಹುತೇಕ ಖಚಿತವಾಗಿದೆ.

2 ತಿಂಗಳಿಗೆ ಸರಿಯಾಗಿ ಸಂಪುಟ ವಿಸ್ತರಣೆ
ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಎರಡು ತಿಂಗಳಿಗೇ ಸರಿಯಾಗಿ ಸಂಪುಟ ವಿಸ್ತರಣೆ ನಡೆಯುತ್ತಿರುವುದು ವಿಶೇಷ. ಡಿ.ಕೆ.ಶಿವಕುಮಾರ್ ನೇತೃತ್ವದ 14 ಜನರ ಕ್ಯಾಬಿನೆಟ್ ಜೂನ್ 3ರಂದು ಪದಗ್ರಹಣ ಮಾಡಿತ್ತು. ಎಐಸಿಸಿ ನಾಯಕರಿಂದ ಸಚಿವರ ಪಟ್ಟಿ ಅನುಮೋದನೆ ವಿಳಂಬದಿಂದ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಿಕೆಯಾಗಿತ್ತು.
ಮುಖ್ಯಮಂತ್ರಿಗಳು ಸೇರಿ ಒಟ್ಟು 34 ಸದಸ್ಯ ಬಲದ ಸಚಿವ ಸಂಪುಟದಲ್ಲಿ ಸದ್ಯ ಖಾಲಿ ಇರುವ 20 ಸ್ಥಾನಗಳ ಪೈಕಿ 18 ಸಚಿವ ಸ್ಥಾನಗಳನ್ನು ಭರ್ತಿ ಮಾಡಿ, 2 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಸಂಪುಟ ವಿಸ್ತರಣೆಯಲ್ಲಿ ಹೊಸಮುಖಗಳಿಗೆ ಆದ್ಯತೆ ಸಿಗುತ್ತಿದ್ದು, ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿದ್ದ 6 ಮಂದಿಗೆ ಮತ್ತೆ ಅವಕಾಶ ಗಿಟ್ಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಪ್ರಮಾಣ ವಚನ
ಲೋಕಭವನದ ಗಾಜಿನ ಮನೆಯಲ್ಲಿನೂತನ ಸಚಿವರ ಪದಗ್ರಹಣ ಸೋಮವಾರ ಸಂಜೆ ನಡೆಯುವ ನಿರೀಕ್ಷೆಯಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.


