BBMP
Loading ...

DK Shivakumar

Greater Bengaluru News9 : ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು, ಡೀಲ್‌ಗಳು ಅಥವಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್ ವಿಧಿವಿಜ್ಞಾನ (ಫೊರೆನ್ಸಿಕ್) ವ್ಯಾನ್‌ಗಳು ಹಾಗೂ 75 ಬೊಲೆರೊ ವಾಹನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

“ಇದನ್ನು ನನ್ನ ಮನವಿ ಎಂದು ಬೇಕಾದರೂ ಪರಿಗಣಿಸಿ, ಅಥವಾ ಅಧಿಕೃತ ಆದೇಶ ಎಂದು ಭಾವಿಸಿ. ಪೊಲೀಸ್ ಇಲಾಖೆಯಲ್ಲಿರುವ ಯಾರೇ ಆಗಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕೈಜೋಡಿಸಿದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ” ಎಂದು ಸಿಎಂ ಎಚ್ಚರಿಕೆ ನೀಡಿದರು.

ಕಳೆದ ಒಂದು ವರ್ಷದಲ್ಲಿ ರಾಜ್ಯ ಪೊಲೀಸ್ ಇಲಾಖೆ 375 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, 1,500 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವುದು ದೊಡ್ಡ ಸಾಧನೆ ಎಂದು ಸಿಎಂ ಶ್ಲಾಘಿಸಿದರು.

ಡ್ರಗ್ಸ್ ಜಾಲದ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಘೋಷಿಸಿದರು.

ಮಾದಕ ವಸ್ತುಗಳ ಅಕ್ರಮ ಸಾಗಾಟ ತಡೆಯಲು ಅಂತರ್‌ರಾಜ್ಯ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ಸ್ ರಾಜ್ಯದೊಳಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ, ಅಪರಾಧಗಳು ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಅಪರಾಧ ಪತ್ತೆ ಕಾರ್ಯಕ್ಕೆ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ರೌಡಿಸಂ ಸಂಪೂರ್ಣ ನಿಯಂತ್ರಣಕ್ಕೆ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಲಂಚದ ಮೂಲಕ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶವಿಲ್ಲ, ಅರ್ಹತೆ ಮತ್ತು ಪ್ರತಿಭೆಯ ಆಧಾರದ ಮೇಲಷ್ಟೇ ನೇಮಕಾತಿ ನಡೆಯಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಅಲ್ಲದೆ, ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಭದ್ರತೆ ಹೆಚ್ಚಿಸಲು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದರು.

“ಅಪರಾಧ ನಡೆದ ಬಳಿಕ ತನಿಖೆ ಮಾಡುವುದಕ್ಕಿಂತ, ಅಪರಾಧ ನಡೆಯದಂತೆ ತಡೆಯುವುದು ಮುಖ್ಯ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Leave a Reply

Your email address will not be published. Required fields are marked *