ನವದೆಹಲಿ: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ( Mekedatu Project ) ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೆರಿಯಂತಹ ನೆರೆ ರಾಜ್ಯಗಳ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
ರಾಜ್ಯಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಸಂಸದ ಡಾ. ಎ. ರಾಮದಾಸ್ ಕೇಳಿದ ಪ್ರಶ್ನೆಗೆ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಲಿಖಿತ ಉತ್ತರವನ್ನು ನೀಡಿದ್ದಾರೆ.
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ, ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರವು ತಮಿಳುನಾಡು, ಕೇರಳ ಅಥವಾ ಪುದುಚೇರಿ ರಾಜ್ಯಗಳ ಅನುಮತಿ ಪಡೆಯಬೇಕೆಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ. ರಾಜ್ಯಸಭೆ ಸದಸ್ಯ ಡಾ. ಅನ್ಬುಮಣಿ ರಾಮದಾಸ್ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯವು ಈ ಲಿಖಿತ ಉತ್ತರ ನೀಡಿದೆ.
ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ನೀಡಿರುವ ಉತ್ತರದ ಪ್ರಕಾರ, 2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ 2007ರ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ (CWDT) ತೀರ್ಪಿನ ‘ನಿಯಮ 18’ ಅನ್ನು ಎತ್ತಿಹಿಡಿಯಲಾಗಿದೆ. ಅದರಂತೆ, ನ್ಯಾಯಾಧಿಕರಣದ ಆದೇಶಕ್ಕೆ ಭಂಗ ಬಾರದ ರೀತಿಯಲ್ಲಿ ಯಾವುದೇ ರಾಜ್ಯವು ತನ್ನ ಗಡಿಯೊಳಗೆ ನೀರಿನ ಬಳಕೆಯನ್ನು ನಿಯಂತ್ರಿಸುವ ಅಥವಾ ಅದರ ಪ್ರಯೋಜನವನ್ನು ಪಡೆಯುವ ಸಂಪೂರ್ಣ ಹಕ್ಕು ಹಾಗೂ ಅಧಿಕಾರವನ್ನು ಹೊಂದಿದೆ.
ಇದರೊಂದಿಗೆ ಬಹುನಿರೀಕ್ಷಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಕುರಿತಾಗಿಯೂ ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಸರ್ಕಾರವು 2019ರಲ್ಲಿ ಸಲ್ಲಿಸಿದ್ದ ಮೇಕೆದಾಟು ಕುಡಿಯುವ ನೀರು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ಸದ್ಯ ಯೋಜನಾ ಪ್ರಾಧಿಕಾರಕ್ಕೆ ಮರಳಿಸಲಾಗಿದೆ.
ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ಆದೇಶ ಹಾಗೂ ಕೇಂದ್ರ ಜಲ ಆಯೋಗದ (CWC) ಪ್ರಸ್ತುತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕೃತ ಡಿಪಿಆರ್ (DPR) ಅನ್ನು ಮರುಸಲ್ಲಿಸುವಂತೆ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.


