Greater Bengaluru News9 : ಕಾಂಗ್ರೆಸ್ ಸಚಿವರ ಖಾತೆ ಖ್ಯಾತೆ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿಗಾಗಿ ಎರಡು ದಿನಗಳ ದೆಹಲಿಗೆ ತೆರಳಿದ್ದಾರೆ. ಖಾತೆ ಕುರಿತಂತೆ ಕೆಲವು ಸಚಿವರ ಅಸಮಾಧಾನದ ನಡುವೆಯೂ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಷಯಗಳ ಕುರಿತು ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದು, ಕೆಲವು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಡಿಕೆ ಶಿವಕುಮಾರ್ ಮೊದಲಿಗೆ ಎಐಸಿಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಎಐಸಿಸಿ ಕಚೇರಿ ಮತ್ತು ಪಕ್ಷದ ವಿವಿಧ ಮುಂಭಾಗದ ಸಂಸ್ಥೆಗಳ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಹಿರಿಯ ಐಎಎಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಗುರುವಾರ ನೀತಿ ಆಯೋಗದ 11ನೇ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸಿಎಂ ಡಿಕೆ ಶಿವಕುಮಾರ್ ಸಮಯ ಕೇಳಿದ್ದಾರೆ. ಗುರುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆಯಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ಈ ಸಭೆಯ ಹೊರತಾಗಿ ಪ್ರತ್ಯೇಕ ಭೇಟಿಗೆ ಡಿಕೆಶಿ ಸಮಯ ಕೇಳಿದ್ದಾರೆ.
ಇನ್ನು ಈ ಹಿಂದೆ ಕರ್ನಾಟಕ ಭವನದ ಕಾರ್ಯವೈಖರಿಗೆ ಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಡಿ.ಕೆ ಶಿವಕುಮಾರ್ ಗ್ರ್ಯಾಂಡ್ ವೆಲ್ಕಮ್ಗೆ ಕರ್ನಾಟಕ ಭವನ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿಯಾಗಿ ಮೊದಲ ಬಾರಿ ಆಗಮನ ಹಿನ್ನೆಲೆ ಅದ್ಧೂರಿ ಸ್ವಾಗತ ಕೋರಲು ಕರ್ನಾಟಕ ಭವನ ಸಿಬ್ಬಂದಿ ತಯಾರಿ ನಡೆಸಿದ್ದಾರೆ. ಕರ್ನಾಟಕ ಭವನಕ್ಕೆ ಥಳಿರು ತೋರಣ, ಹೂವಿನ ಅಲಂಕಾರದ ಮೂಲಕ ಡಿಕೆಶಿಗೆ ಸ್ವಾಗತ ಕೋರಲಿದ್ದು, ಡ್ಯಾಮೇಜ್ ಕಂಟ್ರೋಲ್ಗೆ ಕರ್ನಾಟಕ ಭವನದ ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಮೀಟಿಂಗ್ ಬೆನ್ನಲ್ಲೇ ಕರ್ನಾಟಕ ಭವನ ಆವರಣ ಸ್ವಚ್ಛಗೊಳಿಸಿ, ಸಿಎಂ ಸ್ವಾಗತಕ್ಕೆ ಸಜ್ಜುಗೊಳಿಸಲಾಗುತ್ತಿದೆ.


