BBMP
Loading ...

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಪಿ. ಯೋಗೇಶ್ವರ್​ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಬಿಜೆಪಿಯಲ್ಲೇ ಇರುತ್ತಾರಾ? ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ? ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಜತೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್​ ಸೇರುತ್ತಾರೆ ಎಂಬ ವದಂತಿಗೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.

ಸಿ.ಪಿ. ಯೋಗೇಶ್ವರ್​ ಅವರು ಇಂದು (ಅ.23) ಬೆಳಗ್ಗೆ ಡಿ.ಕೆ. ಶಿವಕುಮಾರ್​ ನಿವಾಸದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಯೋಗೇಶ್ವರ್​ ಅವರು ಕಾಂಗ್ರೆಸ್​ ಸೇರುವುದು ಖಚಿತವಾಗಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್​ ಪಕ್ಷ ಇಂದೇ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಂದ್ರ ಅವರಿಗೆ ವಾಟ್ಸ್​ಆ್ಯಪ್​ ಮೂಲಕ ಸಿ.ಪಿ. ಯೋಗೇಶ್ವರ್​ ಅವರು ರಾಜೀನಾಮೆ ಸಂದೇಶವನ್ನು ರವಾನಿಸಿದ್ದಾರೆಂದು ತಿಳಿದುಬಂದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಪಿವೈ ಕಾಂಗ್ರೆಸ್​ ಸೇರುವುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಡಿಸಿಎಂ ಡಿಕೆಶಿ, ಮಾಜಿ ಸಂಸದ ಡಿ.ಕೆ. ಸುರೇಶ್​, ಮದ್ದೂರು ಶಾಸಕ ಉದಯ್ ಗೌಡ, ಸಚಿವ ಜಮೀರ್​ ಅಹ್ಮದ್​, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್​ ತಂಗಡಗಿ ಇದ್ದರು.

ಜೆಡಿಎಸ್​ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಆಫರ್​ ಅನ್ನು ಸಿಪಿವೈ ತಿರಸ್ಕರಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ನಾಯಕರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸ್ವತಃ ಸಿಪಿವೈ ಆರೋಪ ಮಾಡಿದ್ದಾರೆ. ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಆದರೆ, ಬಿಜೆಪಿ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯೋಗೇಶ್ವರ್​ ಅವರು ಕೊನೆಗೂ ಕಾಂಗ್ರೆಸ್​ ಬಾಗಿಲನ್ನು ಬಡಿದಿದ್ದಾರೆ. ಇಂದು ಸಂಜೆ ಅಥವಾ ನಾಳೆ ಕಾಂಗ್ರೆಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ.

ಅ.21ರಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಯೋಗೇಶ್ವರ್​ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಯೋಗೇಶ್ವರ್​, ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದರು. ನನಗೆ ಟಿಕೆಟ್​ ಕೊಡಲು ಇಷ್ಟವಿರದಿದ್ದರೆ ತಮ್ಮ ಮಗನಿಗೆ ಕೊಡಲಿ ಅದನ್ನು ಬಿಟ್ಟು ನಾನು ಕಾಂಗ್ರೆಸ್​ ನಾಯಕರನ್ನು ಸಂಪರ್ಕಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡುವ ಅವಶ್ಯಕತೆ ಅವರಿಗಿಲ್ಲ. ನಾನು ಯಾವ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿಲ್ಲ. ನನಗೆ ಜೆಡಿಎಸ್​ ಚಿಹ್ನೆ ಅಡಿ ಸ್ಪರ್ಧಿಸಲು ಇಷ್ಟವಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ನನ್ನ ಜನರು ಕೂಡ ಜೆಡಿಎಸ್​ನಿಂದ ಸ್ಫರ್ಧೆ ಬೇಡ ಎನ್ನುತ್ತಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿ ಬಳಿಯೂ ಚರ್ಚೆ ಮಾಡಿದ್ದೇನೆ. ಆದರೆ, ಅವರಿಗೆ ತಮ್ಮ ಮಗನಿಗೆ ಟಿಕೆಟ್​ ಕೊಡಿಸಬೇಕೆಂಬ ಆಸೆ ಇದೆ. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಲು ನಿರ್ಧರಿದ್ದೇನೆ. ಆದರೆ, ಯಾರೊಬ್ಬರು ನನಗೆ ಬೆಂಬಲ ಕೊಡುತ್ತಿಲ್ಲ ಎಂದು ಯೋಗೇಶ್ವರ್ ಬೇಸರ ಹೊರಹಾಕಿದ್ದರು.

ನಡುರಸ್ತೆಯಲ್ಲಿ ನಿಂತು ಬಿಬಿಎಂಪಿ ಅಧಿಕಾರಿಗಳ ಮುಖವಾಡ ಕಳಚಿದ ಲಾಯರ್ ಜಗದೀಶ್!

Leave a Reply

Your email address will not be published. Required fields are marked *