ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ್ಳತನ, ಬೈಕ್ ಮತ್ತು ವಸ್ತುಗಳ ಕಳ್ಳತನ , ಪಿಕ್‌ಪಾಕೆಟ್ ಸಾಮಾನ್ಯವಾಗಿದೆ. ಆದರೆ ಈ ಕಳ್ಳತನಗಳ ಪಟ್ಟಿಗೆ ಬೆಂಗಳೂರಿನ ಬಸ್ ಸ್ಟ್ಯಾಂಡ್‌ಗಳು ಕೂಡ ಸೇರಿದಂತಿದೆ. ಹೌದು, ಇದ್ದಕ್ಕಿದಂತೆ ಬಸ್ ತಂಗುದಾಣಗಳು ಕಣ್ಮರೆಯಾಗಿದೆ. ಪಾಲಿಕೆ ನಿರ್ಮಿಸಿರುವ ಹಲವು ಬಸ್ ತಂಗುದಾಣ ಮಿಸ್ಸಿಂಗ್ ಆಗಿದ್ದು, ಬಸ್ ನಿಲ್ದಾಣಗಳ ಮಿಸ್ಸಿಂಗ್ ಕುರಿತು ತನಿಖೆ ನಡೆಸುವಂತೆ ಪಾಲಿಕೆ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಗೆ ಮಾಹಿತಿ ಅಧ್ಯಯನ ಕೇಂದ್ರದ ಬಿ ಹೆಚ್ ವೀರೇಶ್ ದೂರು ನೀಡಿದ್ದಾರೆ. ಅಲ್ಲದೇ ಬೆಂಗಳೂರ ನಗರ ಪೊಲೀಸ್ ಆಯುಕ್ತ ದಯಾನಂದಗೆ ದೂರು ಸಲ್ಲಿಕೆ ಮಾಡಲಾಗಿದೆ.
ವಿಜಯನಗರದ ಗೋವಿಂದರಾಜನಗರ ವಾರ್ಡನಲ್ಲಿ ಬಸ್ ನಿಲ್ದಾಣಗಳೇ ಕಣ್ಮರೆಯಾಗಿದ್ದು, ಬೆಂಗಳೂರು ನಗರ ವಿಜಯನಗರದ ಎಂ.ಸಿ. ಬಡಾವಣೆಯ 14ನೇ ಅಡ್ಡರಸ್ತೆಯಲ್ಲಿ ಸರ್ವಜ್ಞ ಶಾಲೆಯ ಮುಂಭಾಗದಲ್ಲಿದ್ದ ಬಸ್ ಶೆಲ್ಟರ್ ಕಣ್ಮರೆಯಾಗಿದೆ. ಈ ಬಸ್ ಶೆಲ್ಟರ್ ಅನ್ನು ಐದು ವರ್ಷಗಳ ಹಿಂದೆ ಅಂದಾಜು ಹದಿನಾರು ಲಕ್ಷರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಲ್ಲದೇ, ನಗರದಲ್ಲಿ ನಿರ್ಮಾಣವಾದ ಹೈಟೆಕ್ ಬಸ್ ಶೆಲ್ಟರ್ ಎಂಬ ಖ್ಯಾತಿ ಕೂಡ ಪಡೆದುಕೊಂಡಿತ್ತು.
ಈ ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 200 ಬಸ್ ಗಳು ಓಡಾಡುತ್ತಿದ್ದು, ಶಾಲಾ ಮಕ್ಕಳು, ಹಿರಿಯ ನಾಗರೀಕರು, ಮಹಿಳೆಯರಿಗೆ ಬಿಸಿಲಿನಿಂದ, ಮಳೆಯಿಂದ ರಕ್ಷಣೆ ಪಡೆಯಲು ಸಹಾಯಕವಾಗಿತ್ತು. ಆದರೆ ಸುಮಾರು ಒಂದು ತಿಂಗಳ ಹಿಂದೆ ಈ ಬಸ್ ಶೆಲ್ಟರ್ ಇದ್ದಕ್ಕಿಂದ್ದಂತೆ ಕಾಣೆಯಾಗಿದೆಯಂತೆ. ಬೆಲೆಬಾಳುವ ಕುರ್ಚಿಗಳು, ಮೇಲ್ಚಾವಣಿ ಮತ್ತು ಕಬ್ಬಿಣದ ವಸ್ತುಗಳನ್ನು ಅನಾಮಧೇಯ ವ್ಯಕ್ತಿಗಳು ಕದ್ದೊಯ್ದಿರುವುದು ಕಂಡುಬಂದಿದೆ. ಇದರಿಂದ ಸುಮಾರು ಹದಿನಾರು ಲಕ್ಷರೂಗಳ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ.
ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ನಾಗರೀಕರಿಗೆ ಬಿಸಿಲು ಮಳೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಈ ಬಗ್ಗೆ ಗೋವಿಂದರಾಜನಗರ ವಿಭಾಗದ ಬಿ.ಬಿ.ಎಂ.ಪಿ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವಂತೆ. ಇದೇ ರೀತಿ ಆದಿಚುಂಚನಗಿರಿ ಆಟದ ಮೈದಾನದ ಸಮೀಪದಲ್ಲಿದ್ದ ಇನ್ನೆರಡು ಬಸ್ ಶೆಲ್ಟರ್ ಗಳೂ ಸಹ ಇದೇರೀತಿ ಕಾಣೆಯಾಗಿದೆ. ಇದರಿಂದ ವೃದ್ಧರು, ಹಿರಿಯ ನಾಗರೀಕರು, ಮಕ್ಕಳು, ಮಹಿಳೆಯರು ಎಲ್ಲರಿಗೂ ಅತೀವ ತೊಂದರೆಯಾಗಿದೆ.
ಈ ಹಿನ್ನೆಲೆಯಲ್ಲಿ ಮೇಲೆ ತಿಳಿಸಿದ ಮೂರು ಬಸ್ ಶೆಲ್ಟರ್ಗಳು ಕಾಣೆಯಾಗಿರುವ ಬಗ್ಗೆ ಸೂಕ್ತ ತನಿಖೆಗೆ ವೀರೇಶ್ ಆಗ್ರಹಿಸಿದ್ದಾರೆ. ಅಲ್ಲದೇ, ಇದಕ್ಕೆ ಕಾರಣರಾದವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಕಾಣೆಯಾಗಿರುವ ಈ ಮೂರು ಬಸ್ ಶೆಲ್ಟರ್ ಗಳನ್ನು ಪುನರ್ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.
ಬಿಬಿಎಂಪಿ ಗುತ್ತಿಗೆಯಲ್ಲಿ ಅಕ್ರಮ: ಹೊಸ ವಿಚಾರಣೆಗೆ ಆದೇಶ ನೀಡಿದ ಹೈಕೋರ್ಟ್


