BBMP
Loading ...

lokayukta

Greater Bengaluru News9 : ಪ್ರಜಾಪ್ರಭುತ್ವದ ಪವಿತ್ರ ಕರ್ತವ್ಯವಾದ ಮತದಾನವನ್ನು ಹಣಕ್ಕಾಗಿ ಮಾರಿಕೊಳ್ಳುವ ಸಾರ್ವಜನಿಕರ ಅಂಧಕಾರದ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ. ವೀರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಹೊಸದರಲ್ಲಿ ದೇಶದಲ್ಲಿ ಕೇವಲ ಶೇ. 23 ರಷ್ಟು ಮಾತ್ರ ಅಕ್ಷರಸ್ಥರಿದ್ದರು, ಇಂದು ಆ ಪ್ರಮಾಣ ಶೇ. 80 ಕ್ಕೆ ಏರಿಕೆಯಾಗಿದೆ. ಆದರೆ, ಶಿಕ್ಷಣ ಬೆಳೆದಂತೆ ಮಾನವೀಯ ಮೌಲ್ಯಗಳು ಬೆಳೆಯುವ ಬದಲು, ಹಣಕ್ಕೆ ಮತ ಮಾರಿಕೊಳ್ಳುವ ಹೀನ ಸಂಸ್ಕೃತಿ ಹೆಚ್ಚಿರುವುದು ನಾಚಿಕೆಗೇಡಿನ ಸಂಗತಿ. ಜನ ಮೊದಲು ಲಂಚ ಪಡೆದು ಓಟು ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೆ ಈ ವ್ಯವಸ್ಥೆ ಎಂದಿಗೂ ಸುಧಾರಿಸುವುದಿಲ್ಲ ಎಂದು ಅವರು ಖಾರವಾಗಿ ಎಚ್ಚರಿಸಿದ್ದಾರೆ.

ವ್ಯವಸ್ಥೆಯ ಕೆಳಹಂತದಿಂದ ಹಿಡಿದು ಉನ್ನತ ಮಟ್ಟದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರದ ಕ್ಯಾನ್ಸರ್ ಆಳವಾಗಿ ಬೇರೂರಿದೆ. ಆಡಳಿತ ಯಂತ್ರ, ರಾಜಕೀಯ ರಂಗ ಮಾತ್ರವಲ್ಲದೆ ಪ್ರತಿಯೊಂದು ರಂಗದಲ್ಲೂ ಲಂಚಗುಳಿತನವೇ ರಾರಾಜಿಸುತ್ತಿದೆ. “ಲಂಚಕೋರರು ಮತ್ತು ಭ್ರಷ್ಟರು ನಮ್ಮ ಇಲಾಖೆಯಲ್ಲೂ ಇದ್ದಾರೆ, ನಿಮ್ಮ ಮಧ್ಯೆಯೂ ಇದ್ದಾರೆ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಆವರಿಸಿಕೊಂಡಿದ್ದಾರೆ” ಎಂದು ಅವರು ಯಾವುದೇ ಮುಲಾಜಿಲ್ಲದೆ ವ್ಯವಸ್ಥೆಯ ಅಸಲಿ ಮುಖವನ್ನು ಬೆತ್ತಲೆ ಮಾಡಿದ್ದಾರೆ.

ದೇಶದಲ್ಲಿ ಅಕ್ಷರಸ್ಥರ ಸಂಖ್ಯೆ ಹೆಚ್ಚುತ್ತಿದ್ದರೂ ನೈತಿಕತೆ ಮಾತ್ರ ತಳಕಚ್ಚುತ್ತಿದೆ ಎಂಬುದಕ್ಕೆ ಇಂದಿನ ಸಮಾಜವೇ ಉದಾಹರಣೆ. ಸ್ವಚ್ಛ ಮತ್ತು ಪ್ರಾಮಾಣಿಕ ಸಮಾಜವನ್ನು ನಿರ್ಮಿಸಬೇಕಾದ ವ್ಯವಸ್ಥೆಯಲ್ಲಿ ಇಂದು ಶೇಕಡಾ 90 ರಷ್ಟು ಕಳ್ಳರೇ ತುಂಬಿಕೊಂಡಿದ್ದಾರೆ ಎಂದು ಲೋಕಾಯುಕ್ತ ಉಪಾಧ್ಯಕ್ಷರು ಅತ್ಯಂತ ಕಟು ಶಬ್ದಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಮಾತಿನ ಹಿಂದೆ ಇಡೀ ಸಮಾಜ ಎತ್ತ ಸಾಗುತ್ತಿದೆ ಎಂಬ ಕಳಕಳಿ ಹಾಗೂ ಕಹಿ ಸತ್ಯ ಅಡಗಿದೆ.

ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ ಬಾಗಲಕೋಟೆಯಲ್ಲಿ ನೀಡಿದ ಈ ಹೇಳಿಕೆ, ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಮೆರೆಯುತ್ತಿರುವ ಭ್ರಷ್ಟರಿಗೆ ಮತ್ತು ಹಣಕ್ಕೆ ಮತ ಮಾರಿಕೊಳ್ಳುವ ಜನತೆಗೆ ನೀಡಿದ ಕಪಾಳಮೋಕ್ಷದಂತಿದೆ. ಶಿಕ್ಷಣ ಪಡೆದರೂ ಸರಿ-ತಪ್ಪುಗಳ ಅರಿವಿಲ್ಲದೆ ವರ್ತಿಸುವ ಸಮಾಜಕ್ಕೆ ಕನ್ನಡಿ ಹಿಡಿದಿರುವ ಉಪಲೋಕಾಯುಕ್ತರು, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗಬೇಕಾದರೆ ಮೊದಲು ಜನರ ಮಾನಸಿಕತೆ ಬದಲಾಗಬೇಕು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *