Greater Bengaluru News9:- ಎವಿಆರ್ ರೆಡ್ಡಿ ಮತ್ತು ನಟಿ ನಡುವಿನ ಗಲಾಟೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಎವಿಆರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ನಟಿ, “ನನ್ನ ಪಾಡಿಗೆ ನನ್ನನ್ನು ಬಿಡುತ್ತಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
2021ರಲ್ಲಿ ಶ್ರೀಲಂಕಾ ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಪರಿಚಯವಾಗಿದ್ದು, ನಂತರ ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆ ಬಳಿಕ ಪರಸ್ಪರ ಆತ್ಮೀಯರಾಗಿದ್ದೆವು, ಆದರೆ ಎವಿಆರ್ ರೆಡ್ಡಿಯ ವರ್ತನೆ ಸರಿಯಿಲ್ಲ ಎನ್ನಿಸಿಕೊಂಡ ಕಾರಣ ದೂರವಾಗಿದ್ದೆ ಎಂದು ನಟಿ ಆರೋಪಿಸಿದ್ದಾರೆ. ದೂರವಾದ ಬಳಿಕ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು, ನಾನು ವಾಸವಿದ್ದ ಮನೆಯ ಮಾಲಿಕನಿಗೆ ಅನಾಮಧೇಯ ಪತ್ರ ಬರೆದು ಬೆದರಿಕೆ ಹಾಕಲಾಗಿದೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಇದೀಗ ನಟಿ ಮತ್ತು ಎವಿಆರ್ ರೆಡ್ಡಿ ಜೊತೆಯಲ್ಲಿರುವ ಆತ್ಮೀಯ ಫೋಟೋಗಳು ವೈರಲ್ ಆಗಿದ್ದು, ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ, ಫರ್ನಿಚರ್, ಫ್ಲೈಟ್ ಟಿಕೆಟ್ ಸೇರಿದಂತೆ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ನೀಡಿದ್ದೇನೆ ಎಂದು ಎವಿಆರ್ ರೆಡ್ಡಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿರುವ ಅವರು ನಟಿ ಮಾಡಿರುವ ಕೆಲ ಆರೋಪಗಳನ್ನು ತಳ್ಳಿ ಹಾಕಿದ್ದು, ಸೆಲೆಬ್ರೇಷನ್ ಹಾಗೂ ಇಬ್ಬರು ಜೊತೆಯಿರುವ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ–ಪ್ರತ್ಯಾರೋಪಗಳು ಜೋರಾಗಿದ್ದು, ಸತ್ಯಾಸತ್ಯತೆ ಕುರಿತು ತನಿಖೆ ನಡೆಯಬೇಕಿದೆ.


