BBMP
Loading ...

BBMP Tax

ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಮಾರ್ಚ್ 31ರ ಒಳಗೆ 100 ರೂಪಾಯಿ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿಬಿಡಿ. ಏಪ್ರಿಲ್ 1ರಿಂದ ಶೇಕಡ 100 ದಂಡ ಪಾವತಿಸಬೇಕಾದೀತು ಎಂದು ಲೆಕ್ಕಾಚಾರ ಸಹಿತ ಬೆಂಗಳೂರಿಗರನ್ನು ಬಿಬಿಎಂಪಿ ಎಚ್ಚರಿಸಿದೆ.

ಇದೇ 31ರೊಳಗೆ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಕಟ್ಟಿದರೆ 100 ರೂ ದಂಡ
ಆಸ್ತಿ ತೆರಿಗೆ ಸುಸ್ತಿದಾರರು ದಂಡ ಪಾವತಿ ತಪ್ಪಿಸಿಕೊಳ್ಳುವುದಕ್ಕೆ ಮಾರ್ಚ್‌ 31ರ ತನಕ ಕಾಲಾವಕಾಶ ಇದೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು, ವಿಶೇಷವಾಗಿ ಎಸ್‌ಎಎಸ್‌ ಅರ್ಜಿ ಸಂಖ್ಯೆ ಹೊಂದಿದವರು ಮಾರ್ಚ್‌ 31ರ ಒಳಗೆ ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಪಾವತಿಸಬೇಕು. ಹೀಗೆ ತೆರಿಗೆ ಪಾವತಿಸುವಾಗ 100 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಅಕಸ್ಮಾತ್ ಮಾರ್ಚ್ 31ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ದರೆ, ಆಗ ಏಪ್ರಿಲ್ 1 ರಿಂದ ಪಾವತಿಸುವಾಗ ಶೇಕಡ 100 ದಂಡ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಸಿದೆ.

ಏಪ್ರಿಲ್ 1 ರಿಂದ ಶೇ 100 ದಂಡದ ಲೆಕ್ಕಾಚಾರವನ್ನೂ ಕೊಟ್ಟ ಬಿಬಿಎಂಪಿ
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಅದನ್ನು ಮಾರ್ಚ್‌ 31ರ ಒಳಗೆ ಪಾವತಿಸದೇ ಇದ್ದರೆ, ಏಪ್ರಿಲ್ 1 ರಿಂದ ಶೇಕಡ 100 ದಂಡ ಪಾವತಿಸಬೇಕು ಎಂದು ಬಿಬಿಎಂಪಿ ಹೇಳಿದೆ. ಇದಕ್ಕೆ ಸಂಬಂಧಿಸಿದ ಲೆಕ್ಕಾಚಾರವನ್ನೂ ಅದು ನೀಡಿದೆ. ಅದರಂತೆ, ಮಾರ್ಚ್ 31ರ ಒಳಗೆ ಪಾವತಿಸಬೇಕಾದ ಆಸ್ತಿ ತೆರಿಗೆ ಊಹಿಸೋಣ. 2023-24ನೇ ಸಾಲಿನ ಆಸ್ತಿ ತೆರಿಗೆ 25,000 ರೂಪಾಯಿ ಬಾಕಿ ಇದೆ. ಇದರ ಬಡ್ಡಿ 6000 ರೂಪಾಯಿ. ದಂಡ ಶುಲ್ಕ 100 ರೂಪಾಯಿ ಇರಲಿದೆ. ಈ ಲೆಕ್ಕ ಪ್ರಕಾರ ಮಾರ್ಚ್‌ 31ರ ಒಳಗೆ ಪಾವತಿಸಬೇಕಾದ ಒಟ್ಟು ಮೊಟ್ಟ 31,100 ರೂಪಾಯಿ.

ಇನ್ನು ಮಾರ್ಚ್‌ 31 ರ ಬಳಿಕ ಇದೇ ಬಾಕಿ ತೆರಿಗೆ ಮೊತ್ತ ಪಾವತಿಸುವುದಾದರೆ, ಆಗ 2023-24ನೇ ಸಾಲಿನ ಆಸ್ತಿ ತೆರಿಗೆ 25,000 ರೂಪಾಯಿ ಬಾಕಿಯ ಜತೆಗೆ ಬಡ್ಡಿ ಅಂತ 6000 ರೂಪಾಯಿ ಹಾಗೂ ದಂಡ ಶುಲ್ಕ ಎಂದು 18,500 ರೂಪಾಯಿ ಪಾವತಿಸಬೇಕು. ಒಟ್ಟು ಪಾವತಿಸಬೇಕಾದ ಮೊತ್ತ 49,500 ರೂಪಾಯಿ ಆಗುತ್ತೆ ಎಂದು ಬಿಬಿಎಂಪಿ ವಿವರಿಸಿದೆ.

ಎಸ್‌ಎಎಸ್ ಅಪ್ಲಿಕೇಶನ್ ನಂಬರ್ ಎಂದರೆ
ಎಸ್‌ಎಎಸ್‌ ಅಪ್ಲಿಕೇಶನ್ ನಂಬರ್ ಅಥವಾ ಎಸ್‌ಎಎಸ್‌ ಅರ್ಜಿ ಸಂಖ್ಯೆ ಎಂದರೆ ಅದು ಸ್ವಯಂ ಘೋಷಿತ ಆಸ್ತಿ ಮೌಲ್ಯಮಾಪನ ಅರ್ಜಿ ಸಂಖ್ಯೆ ಎಂದು ಅರ್ಥ. ಸುಸ್ತಿ ತೆರಿಗೆ ಪಾವತಿಸಬೇಕಾದರೆ ಮೊದಲು ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಪ್ರಸ್ತುತ, ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ಆಸ್ತಿ ಮಾಲೀಕರು ಒಟ್ಟಾಗಿ 400 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಬಿಬಿಎಂಪಿಯ ನಿರಂತರ ಪ್ರಯತ್ನಗಳು ಮುಖ್ಯವಾಗಿ ವಾಣಿಜ್ಯ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವತ್ತ ಕೇಂದ್ರೀಕೃತವಾಗಿದ್ದವು. ಆದಾಗ್ಯೂ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ನಿಗದಿತ ಸಮಯದ ಚೌಕಟ್ಟಿನೊಳಗೆ ತೆರಿಗೆ ಪಾವತಿಗಳನ್ನು ತೆರವುಗೊಳಿಸದಿದ್ದರೆ ಯಾವುದೇ ರೀತಿಯ ಆಸ್ತಿಯನ್ನು – ವಸತಿ ಅಥವಾ ವಾಣಿಜ್ಯ – ಹರಾಜು ಮಾಡಬಹುದು. ಹೆಚ್ಚುವರಿಯಾಗಿ, ಭವಿಷ್ಯದ ಸುಸ್ತಿದಾರರನ್ನು ತಡೆಯಲು ಮತ್ತು ಸಮಯೋಚಿತ ತೆರಿಗೆ ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ದಂಡ ಮತ್ತು ಬಡ್ಡಿ ಹೆಚ್ಚಳ ಸೇರಿದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರಲು ಬಿಬಿಎಂಪಿ ಪರಿಗಣಿಸುತ್ತಿದೆ.

ಹೋಟೆಲ್​ ಉದ್ಯಮದಲ್ಲಿ ಸ್ವಾವಲಂಬಿ ಮಹಿಳೆಯಾಗಿ ಸೇವೆ ಸಲ್ಲಿಸುತ್ತಿರುವ ಚಾಮುಂಡಮ್ಮಗೆ ಸೇವಾ ರತ್ನ ಪ್ರಶಸ್ತಿ

Leave a Reply

Your email address will not be published. Required fields are marked *