BBMP
Loading ...

ಬೆಂಗಳೂರು: ಸುಪ್ರೀಂಕೋರ್ಟ್‌ನ ಸೂಚನೆಯಂತೆ ಅಕ್ಟೋಬರ್‌ 31 ರಿಂದ ನವೆಂಬರ್ 2 ರವರೆಗೆ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಲಾಗಿದೆ. ಉಳಿದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.

ಪಟಾಕಿ ಬಳಕೆ ಕುರಿತಂತೆ ನ್ಯಾಯಾಲಯವು ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ಅದನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನೂ ನಿಷೇಧಿಸಲಾಗಿದೆ. ಹಸಿರು ಪಟಾಕಿಗಳ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಪಟಾಕಿ ವಹಿವಾಟು ಬಂಧನ

ಆನ್‌ಲೈನ್‌ ಮೂಲಕ ಪಟಾಕಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇಲೆ ಸುಪ್ರೀತ್‌ ಎಂಬಾತನನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ ಬಳಿಯ ಎಳ್ಳುಕುಂಟೆ ನಿವಾಸಿಯಾದ ಸುಪ್ರೀತ್‌, ವರ್ಷವಿಡೀ ಪಟಾಕಿ ವಹಿವಾಟು ನಡೆಸಲು ಪರವಾನಗಿ ಪಡೆದಿದ್ದಾನೆ. ಆತ ಎಳ್ಳುಕುಂಟೆಯಲ್ಲಿ ಶಿವಾನಂದ ಸ್ಟೋರ್ಸ್ ಹೆಸರಿನ ಪಟಾಕಿ ಅಂಗಡಿ ಇಟ್ಟುಕೊಂಡಿದ್ದು, ಆ ಮಳಿಗೆಯಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಲು ಅನುಮತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ

.

ಸುಪ್ರೀತ್‌, ಪರವಾನಗಿ ನಿಯಮ ಉಲ್ಲಂಘಿಸಿ ಆನ್‌ಲೈನ್‌ ಮೂಲಕ ಪಟಾಕಿ ವ್ಯಾಪಾರ ಮಾಡಲು ಮುಂದಾಗಿದ್ದ. ಆತ ಸಾರ್ವಜನಿಕರ ಮನೆ ಬಾಗಿಲಿಗೆ ಪಟಾಕಿ ತಂದು ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಕೊಟ್ಟಿದ್ದ. ಈ ಜಾಹೀರಾತು ನೋಡಿದ ಹಲವರು ಆನ್‌ಲೈನ್‌ನಲ್ಲಿ ಪಟಾಕಿ ಖರೀದಿ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆನ್‌ಲೈನ್‌ ಮೂಲಕ ಪಟಾಕಿ ವಹಿವಾಟು ನಡೆಸದಂತೆ ಸುಪ್ರೀಂಕೋರ್ಟ್‌ 2025 ರಲ್ಲೇ ಆದೇಶ ಹೊರಡಿಸಿದೆ. ಸುಪ್ರೀತ್‌, ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿ ಮತ್ತು ಸಾರ್ವಜನಿಕರ ಸುರಕ್ಷತೆ ಲೆಕ್ಕಿಸದೆ ಆನ್‌ಲೈನ್‌ ಮೂಲಕ ಪಟಾಕಿ ವ್ಯಾಪಾರ ಮಾಡಲು ಮುಂದಾಗಿದ್ದ. ಹೀಗಾಗಿ, ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯಿದೆ ಹಾಗೂ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *