ಬೆಂಗಳೂರು: ಬಿಬಿಎಂಪಿ ವಿಭಜಿಸಿ ರಚನೆಯಾಗಲಿರುವ ಹೊಸ ಪಾಲಿಕೆಗಳಲ್ಲಿ ಒಬ್ಬ ಸ್ಪರ್ಧಿಯು ಒಂದು ವಾರ್ಡ್‌ನಿಂದ ಮಾತ್ರ ಸ್ಪರ್ಧಿಸಲು ನಿರ್ಬಂಧ ವಿಧಿಸುವ ಪ್ರಸ್ತಾಪಕ್ಕೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (ಜಿಬಿಜಿಬಿ) ಒಪ್ಪಿಗೆ ನೀಡಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಏಕಕಾಲದಲ್ಲಿ ವಿವಿಧ ವಾರ್ಡ್‌ಗಳಿಂದ ನಿಲ್ಲುವ ಸಂಪ್ರದಾಯ ಮುಂದುವರಿಯಲಿದ್ದು, ಮರುಚುನಾವಣೆಗಾಗಿ ಅನಗತ್ಯ ಸಮಯ, ಹಣ ವೆಚ್ಚ ಮಾಡುವುದು ಅನಿವಾರ್ಯವಾಗಿದೆ.
ಆಡಳಿತ ಸುಧಾರಣೆಗಾಗಿಯೇ ವಿಧೇಯಕ ತರಲಾಗುತ್ತಿದೆ ಎಂಬುದಾಗಿ ಸರ್ಕಾರ ಹೇಳುತ್ತಲೇ ಬಂದಿತ್ತು. ವಿವಿಧ ಆಯಾಮಗಳಲ್ಲಿ ಹೊಸ ಅಂಶಗಳನ್ನು ಸೇರಿಸಿ ಆಡಳಿತ ಬಿಗಿ ಮಾಡಲು ‘ಗುಡ್ ಗೌರ್ನೆನ್ಸ್’ಗೆ ಮಣೆ ಹಾಕಲಾಗಿದೆ ಎಂದೇ ಅಧಿವೇಶನದಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ, ಗ್ರೇಟರ್ ಬೆಂಗಳೂರು ರಚನೆಯಾಗುವ ಮೊದಲ ಹಂತವಾದ ಚುನಾವಣಾ ಸುಧಾರಣೆಗೆ ಬೆನ್ನು ಹಾಕಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಜಿಬಿಜಿಬಿ ಪ್ರಕಾರ ಸ್ಪರ್ಧಿಯೊಬ್ಬ ತನಗಿಷ್ಟ ಬಂದಷ್ಟು ಕ್ಷೇತ್ರಗಳಲ್ಲಿ ಉಮೇದುವಾರಿಕೆ ದಾಖಲಿಸಬಹುದಾಗಿದೆ. ಈ ಅವಕಾಶ ಬಳಸಿಕೊಂಡು ಅಭ್ಯರ್ಥಿಯೊಬ್ಬರು ಹೆಚ್ಚಿನ ವಾರ್ಡ್‌ಗಳಲ್ಲಿ ಸ್ಪರ್ಧಿಸಿ ಗೆಲ್ಲಬಹುದಾಗಿದೆ. ಒಂದು ವೇಳೆ ಎರಡೂ ವಾರ್ಡ್‌ಗಳಿಂದ ಚುನಾಯಿತನಾದ್ದಲ್ಲಿ ಒಂದನ್ನು ಉಳಿಸಿಕೊಂಡು ಇನ್ನೊಂದು ವಾರ್ಡ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮರುಚುನಾವಣೆ ನಡೆಯಲು ಕಾರಣವಾಗಲಿದೆ. ಇದರಿಂದಾಗಿ ಹಿಂದೆ ಇದ್ದ ಹಳೆಯ ಪದ್ಧತಿಯೇ ಮುಂದೆಯೂ ಮುಂದುವರಿಯಲಿದೆ.
ಅಭ್ಯರ್ಥಿಯೊಬ್ಬರು ಒಂದಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದಲ್ಲಿ ಒಂದನ್ನು ಉಳಿಸಿಕೊಂಡು ಇತರರೆಡೆಯ ಸ್ಥಾನಕ್ಕೆ ರಾಜೀನಾಮೆ ನೀಡಲು 3 ತಿಂಗಳ ಅವಕಾಶ ನೀಡಲಾಗಿದೆ. ಹಿಂದಿನ ನಿಯಮಾವಳಿಯಲ್ಲಿ 15 ದಿನಗಳ ಗಡುವು ಇತ್ತು. ಒಂದು ವೇಳೆ ವಾರ್ಡ್ ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ಈ ಹಿಂದೆ ಶಾಸಕ, ಸಂಸದರಾದವರು ಕೂಡ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾರ್ಪೊರೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ರಾಜಾಜಿನಗರ ಕ್ಷೇತ್ರದ ಶಾಸಕರಾಗಿದ್ದ ನೆ.ಲ.ನರೇಂದ್ರಬಾಬು ನಾಗಪುರ ವಾರ್ಡ್‌ನಿಂದ ಗೆದ್ದು ಕಾರ್ಪೊರೇಟರ್ ಆಗಿದ್ದರು. ಚಂದ್ರಶೇಖರ್ ಬಸವನಗುಡಿ ಕ್ಷೇತ್ರದ ಶಾಸಕರಾಗಿದ್ದುಕೊಂಡೇ ಹನುಮಂತನಗರ ವಾರ್ಡ್‌ನ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದರು. ಬಿಜೆಪಿಯ ಮುನಿಸ್ವಾಮಿ ಕಾಡುಗೋಡಿ ವಾರ್ಡ್ ಸದಸ್ಯನಾಗಿದ್ದುಕೊಂಡೇ ಕೋಲಾರ ಸಂಸದರಾಗಿ ಆಯ್ಕೆಯಾಗಿ ಎರಡೂ ಕಡೆ ಸದಸ್ಯರಾಗಿ ಕೆಲಸ ಮಾಡಿದ ನಿದರ್ಶನ ಇದೆ. ಇದಕ್ಕಾಗಿ ಆ ಸಮಯದಲ್ಲಿ ಎರಡೆರಡು ಕಡೆ ಸದಸ್ಯರಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಕಾಯ್ದೆಯಲ್ಲಿ ಅವಕಾಶ ಇದ್ದರಿಂದ ಈ ಮೂವರೂ ರಾಜೀನಾಮೆ ನೀಡಿರಲಿಲ್ಲ.
ಒಂದು ಪಾಲಿಕೆಯಲ್ಲಷ್ಟೇ ಸ್ಪರ್ಧೆ: ಹೊಸ ಪಾಲಿಕೆಗಳು ರಚನೆಯಾದಲ್ಲಿ ಆಯಾ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮಾತ್ರ ಅಭ್ಯರ್ಥಿ ಸ್ಪರ್ಧಿಸಬೇಕು. ಈ ನಿಯಮವನ್ನೇ ಒಂದು ಪಾಲಿಕೆಯಲ್ಲಿ ಒಂದು ವಾರ್ಡ್‌ನಿಮದ ಮಾತ್ರ ಚುನಾವಣೆಗಿಳಿಯಬೇಕು ಎಂಬ ನೀತಿಗೆ ಸರ್ಕಾರ ಮಣೆ ಹಾಕಬೇಕಿತ್ತು ಎಂದು ಕೆಲ ಕಾರ್ಪೊರೇಟರ್‌ಗಳು ಪ್ರತಿಪಾದಿಸಿದ್ದಾರೆ.
ಎಲೆಕ್ಷನ್‌ಗೆ ಪ್ರಾಧಿಕಾರದ ಒಪ್ಪಿಗೆ ಅಗತ್ಯ: ರಾಜ್ಯ ಚುನಾವಣೆ ಆಯೋಗವು ಸಾರ್ವತ್ರಿಕ ಚುನಾವಣೆ, ಮರುಚುನಾವಣೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದೊಂದಿಗೆ ಸಮಾಲೋಚಿಸಿಯೇ ದಿನ ನಿಗದಿ ಮಾಡಬೇಕಿದೆ. ಇದು ಆಡಳಿತ ನಡೆಸುವ ಪಕ್ಷವು ಅಧಿಕಾರ ಭದ್ರಪಡಿಸಿಕೊಳ್ಳಲು ಎಲೆಕ್ಷನ್ ಅನ್ನು ತನ್ನ ಮೂಗಿನ ನೇರಕ್ಕೆ ನಡೆಯುವಂತೆ ನೋಡಿಕೊಳ್ಳಬಹುದು. ಈ ಅಂಶವು ಪ್ರಜಾಪ್ರಭುತ್ವದಡಿ ಸರಿಯಾದ ನಿರ್ಧಾರ ಆಗದು ಎಂದು ಕೆಲ ನಾಗರಿಕ ಸಂಘಟನೆಗಳು ಪ್ರತಿಕ್ರಿಯಿಸಿವೆ.
ಚುನಾವಣೆಗೆ ನಿಲ್ಲಲು 21 ವರ್ಷ ಸಾಕು: ಭವಿಷ್ಯದ ಪಾಲಿಕೆ ಚುನಾವಣೆಗಳಲ್ಲಿ ವ್ಯಕ್ತಿಯೊಬ್ಬರು ಸ್ಪಧಿಸಲು 21 ವರ್ಷ ಪೂರೈಸಿರಬೇಕೆಂಬ ವಯಸ್ಸಿನ ಮಿತಿ ಹಾಕಲಾಗಿದೆ. ಅಂದರೆ, ಯುವ ಕಾರ್ಪೊರೇಟರ್ ಆಗಲು ಅವಕಾಶ ಹಲವರಿಗೆ ಒದಗಿಬರಬಹುದು. ಇನ್ನುಳಿದಂತೆ ಅರ್ನಹತೆ, ಚುನಾವಣೆ ಪ್ರಕ್ರಿಯೆ, ಮತಗಟ್ಟೆ ಸ್ಥಾಪನೆ, ನಿರ್ವಹಣೆ ಸೇರಿ ಇತರ ಅಂಶಗಳು ಹಾಲಿ ಚುನಾವಣಾ ನಿಯಮಗಳಂತೆ ಇರಲಿವೆ ಎಂದು ವಿಧೇಯಕದಲ್ಲಿ ಅಡಕಗೊಳಿಸಲಾಗಿದೆ.


