Greater Bengaluru News9: CL-7 ಲೈಸೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮಿಷನರ್ (ಡಿಸಿ), ಎಸ್ಪಿ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶಿಸಿದೆ.
ಬಂಧಿತರನ್ನು ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿಗೆ ಎಂದು ಗುರುತಿಸಲಾಗಿದೆ. CL-7 ಲೈಸೆನ್ಸ್ ಮಂಜೂರು ಮಾಡಿಕೊಡುವುದಕ್ಕಾಗಿ ಈ ಮೂವರು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ತಡರಾತ್ರಿ ವರೆಗೆ ವಿಚಾರಣೆ ನಡೆಸಿದ್ದು, ಲಂಚ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಎಲ್ಲಾ ದಾಖಲೆಗಳೊಂದಿಗೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಕೋರ್ಟ್, ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ.
CL-7 ಲೈಸೆನ್ಸ್ ಎಂದರೇನು?
CL-7 ಲೈಸೆನ್ಸ್ ಎಂದರೆ ಕರ್ನಾಟಕದಲ್ಲಿ ಹೋಟೆಲ್‌ಗಳು ಹಾಗೂ ವಸತಿ ಗೃಹಗಳಿಗೆ ಅಬಕಾರಿ ಇಲಾಖೆ ನೀಡುವ ಮದ್ಯ ಪರವಾನಗಿ. ಈ ಪರವಾನಗಿ ಹೊಂದಿರುವ ಹೋಟೆಲ್‌ಗಳಿಗೆ ಮಾತ್ರ ಮದ್ಯ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ.


