Greater Bengaluru News9 : ಅಯೋಧ್ಯೆ ರಾಮ ಮಂದಿರದಲ್ಲಿ ದೇಣಿಗೆ ಹಣ ದುರುಪಯೋಗದ ಆರೋಪದ ಹಿನ್ನೆಲೆ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಹುಂಡಿ ಹಣದ ಸಂಗ್ರಹ, ಎಣಿಕೆ ಹಾಗೂ ಭದ್ರತೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಆದೇಶ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ದೇವಾಲಯಗಳಲ್ಲಿ ಎಲ್ಲರಿಗೂ ಗೋಚರಿಸುವ ಸ್ಥಳಗಳಲ್ಲಿ ಮಾತ್ರ ಹುಂಡಿಗಳನ್ನು ಅಳವಡಿಸಬೇಕು. ಹುಂಡಿಗಳ ಮೇಲೆ ನಾಲ್ಕು ದಿಕ್ಕಿನಿಂದ ನಿಗಾ ವಹಿಸುವ ರೀತಿಯಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ಅದರ ದೃಶ್ಯಗಳನ್ನು ಸರ್ವರ್ನಲ್ಲಿ ಸಂರಕ್ಷಿಸಬೇಕು. ಜಿಲ್ಲಾಧಿಕಾರಿ ಕಚೇರಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಿಂದಲೂ ಈ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಸಿಸಿಟಿವಿ ವ್ಯವಸ್ಥೆಯನ್ನು ಹಾನಿಗೊಳಿಸುವ ಅಥವಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳನ್ನು ತಡೆಯಲು ವೆಬ್ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ. ಜೊತೆಗೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮತ್ತು ನಿಯಂತ್ರಣ ಕೊಠಡಿಗಳೊಂದಿಗೆ ಸಿಸಿಟಿವಿ ಲೈವ್ ಫೀಡ್ ಸಂಪರ್ಕ ಕಲ್ಪಿಸಿ ನಿರಂತರ ನಿಗಾ ವಹಿಸುವ ವ್ಯವಸ್ಥೆ ರೂಪಿಸಲಾಗುತ್ತದೆ.
ಭಕ್ತರು ನಗದು ದೇಣಿಗೆಯ ಬದಲು ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹುಂಡಿಗಳ ಬಳಿ ಮಾತ್ರ ಅಧಿಕೃತ ಕ್ಯೂಆರ್ ಕೋಡ್ಗಳನ್ನು ಅಳವಡಿಸಲು ಸೂಚಿಸಲಾಗಿದೆ. ಯುಪಿಐ, ಭೀಮ್ ಹಾಗೂ ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ದೇವಾಲಯದ ಲೆಕ್ಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸಿ ಪಾರದರ್ಶಕ ಹಣಕಾಸು ನಿರ್ವಹಣೆ ಖಚಿತಪಡಿಸಿಕೊಳ್ಳಬೇಕು. ಕ್ಯೂಆರ್ ಕೋಡ್ ದುರುಪಯೋಗವಾಗದಂತೆ ದೇವಾಲಯದ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು ಎಂದು ಆದೇಶಿಸಲಾಗಿದೆ.
ಹುಂಡಿ ಎಣಿಕೆಯನ್ನು ಪೂರ್ವನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು. ಹೆಚ್ಚಿನ ದೇಣಿಗೆ ಬರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಮಾನ್ಯ ದೇಣಿಗೆ ಬರುವ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಹುಂಡಿ ಎಣಿಕೆ ಕಡ್ಡಾಯವಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಸಂಬಂಧಿತ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿಯೇ ನಡೆಸಬೇಕು.
ಹುಂಡಿಯಲ್ಲಿ ದೊರೆಯುವ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಅದೇ ದಿನ ಮೌಲ್ಯಮಾಪನ ಮಾಡಿ ಜಿಲ್ಲಾ ಉಪಖಜಾನೆಯಲ್ಲಿ ಸುರಕ್ಷಿತವಾಗಿ ಜಮಾ ಮಾಡಬೇಕು. ಹುಂಡಿ ತೆರೆಯುವ ಕ್ಷಣದಿಂದ ಬ್ಯಾಂಕ್ಗೆ ಹಣ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯದೊಂದಿಗೆ ವಿಡಿಯೊ ಚಿತ್ರೀಕರಿಸುವುದು ಕಡ್ಡಾಯವಾಗಿದೆ.
ಹುಂಡಿ ಎಣಿಕೆ ವೇಳೆ ಭಾಗವಹಿಸುವ ಸಿಬ್ಬಂದಿಯ ಹಾಜರಾತಿ ಖಚಿತಪಡಿಸಿಕೊಳ್ಳಲು ಫೇಸ್ ರಿಕಗ್ನಿಷನ್ ವ್ಯವಸ್ಥೆ ಅಳವಡಿಸಬೇಕು. ಜೊತೆಗೆ, ಎಣಿಕೆಗೆ ಪ್ರವೇಶಿಸುವ ಮುನ್ನ ಸಿಬ್ಬಂದಿ ತಮ್ಮ ಬಳಿ ಇರುವ ನಗದು ಮೊತ್ತವನ್ನು ಘೋಷಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ಮುಂದೆ ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆ ಪಡೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದರ ಬದಲಿಗೆ ಗೃಹ ರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನೇ ಎಣಿಕೆ ಕಾರ್ಯಕ್ಕೆ ನಿಯೋಜಿಸಬೇಕು. ಹುಂಡಿ ಎಣಿಕೆ ವೇಳೆ ಅಥವಾ ಹುಂಡಿಗಳಲ್ಲಿ ಕಳ್ಳತನ ನಡೆದರೆ ಸಂಬಂಧಿತ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಇದರ ಜೊತೆಗೆ, ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳ ಜಂಟಿ ಪರಿಶೀಲನೆ ನಡೆಸಬೇಕು. ಪ್ರಮುಖ ‘ಎ’ ಹಾಗೂ ‘ಬಿ’ ವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳು ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕು.
ಅನುಷ್ಠಾನದ ಪ್ರಗತಿ, ಪತ್ತೆಯಾದ ನ್ಯೂನತೆಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಸಮಗ್ರ ಅನುಸರಣಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


