Greater Bengaluru News9 : ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರಿಗೆ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಿಸಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಸರಾಸರಿ ಬಿಲ್ ನೀಡಲಾಗುತ್ತದೆ.
ಬೆಸ್ಕಾಂ ತಿಳಿಸಿರುವಂತೆ, ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ಆಧರಿಸಿ ಜುಲೈ ತಿಂಗಳ ವಿದ್ಯುತ್ ಬಿಲ್ ಸಿದ್ಧಪಡಿಸಲಾಗುತ್ತದೆ. ಈ ಬಿಲ್ ಅನ್ನು ಗ್ರಾಹಕರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗುವುದು.
ಆದರೆ ಎಲ್ಲಾ ಗ್ರಾಹಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಎಚ್ಟಿ (HT) ಗ್ರಾಹಕರು, 40 ಎಚ್ಪಿ ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್ಟಿ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸರಾಸರಿ ಬಿಲ್ನಲ್ಲಿ ಹೆಚ್ಚು ಅಥವಾ ಕಡಿಮೆ ಮೊತ್ತ ಬಂದಿದ್ದರೆ, ಆಗಸ್ಟ್ ತಿಂಗಳಿಂದ ನೈಜ ಮೀಟರ್ ರೀಡಿಂಗ್ ಆರಂಭವಾದ ನಂತರ ಅದನ್ನು ಮುಂದಿನ ಬಿಲ್ಗಳಲ್ಲಿ ಸರಿಹೊಂದಿಸಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಇದೇ ವೇಳೆ ಗೃಹ ಜ್ಯೋತಿ ಯೋಜನೆ ಪರಿಶೀಲನೆಗಾಗಿ ಮನೆಗಳಿಗೆ ಭೇಟಿ ನೀಡುವ ಬೆಸ್ಕಾಂ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಪರಿಶೀಲನೆಯ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಪಡಿತರ ಚೀಟಿ ಅಥವಾ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ತೋರಿಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗದೇ ಸಹಕರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.


