Greater Bengaluru News9 : ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬೆಂಗಳೂರಿನ ಪ್ರಮುಖ ಟೋಲ್ ರಸ್ತೆಗಳ ದರವೂ ಇಂದಿನಿಂದ (ಜುಲೈ 1) ಹೆಚ್ಚಳಗೊಂಡಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ, ನೈಸ್ ರಸ್ತೆ ಹಾಗೂ ಅತ್ತಿಬೆಲೆ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ಟೋಲ್ ದರ ಜಾರಿಗೆ ಬಂದಿದೆ.
ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NECE) ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ವಿವಿಧ ಹಂತಗಳ ಟೋಲ್ ದರವನ್ನು ಪರಿಷ್ಕರಿಸಿದೆ. ಇದರಂತೆ ನೈಸ್ ರಸ್ತೆಯ ವಿವಿಧ ಸೆಕ್ಷನ್‌ಗಳಲ್ಲಿ ಕಾರುಗಳ ಟೋಲ್ ದರವನ್ನು ಹೆಚ್ಚಿಸಲಾಗಿದೆ.
ನೈಸ್ ರಸ್ತೆಯ ಹೊಸ ಟೋಲ್ ದರ (ಕಾರುಗಳಿಗೆ):
* ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂಪಾಯಿ
* ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂಪಾಯಿ
* ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂಪಾಯಿ
* ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂಪಾಯಿ
* ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂಪಾಯಿ
* ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂಪಾಯಿ
* ಲಿಂಕ್ ರಸ್ತೆ: 83 ರೂಪಾಯಿ
ಇದೇ ವೇಳೆ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ ಟೋಲ್ ದರವನ್ನೂ ಪರಿಷ್ಕರಿಸಲಾಗಿದೆ. ಕಾರುಗಳಿಗೆ ಸಿಂಗಲ್ ಜರ್ನಿ ಟೋಲ್ ರೂ. 60ರಿಂದ ರೂ. 65ಕ್ಕೆ ಏರಿಕೆಯಾಗಿದೆ. ಮಲ್ಟಿಪಲ್ ಜರ್ನಿ ದರ ರೂ. 100 ಹಾಗೂ ಮಾಸಿಕ ಪಾಸ್ ರೂ. 1,960 ಆಗಿದೆ.
ದ್ವಿಚಕ್ರ ವಾಹನಗಳಿಗೆ ಸಿಂಗಲ್ ಜರ್ನಿ ರೂ. 25, ಲಘು ವಾಣಿಜ್ಯ ವಾಹನಗಳಿಗೆ ರೂ. 90, ಬಸ್ ಹಾಗೂ ಟ್ರಕ್‌ಗಳಿಗೆ ರೂ. 185 ಮತ್ತು ಮಲ್ಟಿ-ಆಕ್ಸಲ್ ವಾಹನಗಳಿಗೆ ರೂ. 365 ಟೋಲ್ ನಿಗದಿಯಾಗಿದೆ.
ಹೊಸೂರು ರಸ್ತೆಯ ಅತ್ತಿಬೆಲೆ ಟೋಲ್ ಪ್ಲಾಜಾದಲ್ಲೂ ದರ ಹೆಚ್ಚಳ ಮಾಡಲಾಗಿದೆ. ಕಾರುಗಳಿಗೆ ಸಿಂಗಲ್ ಜರ್ನಿ ರೂ. 40, ಮಲ್ಟಿಪಲ್ ಜರ್ನಿ ರೂ. 60 ಹಾಗೂ ಮಾಸಿಕ ಪಾಸ್ ರೂ. 1,175 ನಿಗದಿಯಾಗಿದೆ. ಆದರೆ ದ್ವಿಚಕ್ರ ವಾಹನಗಳಿಗೆ ಹಿಂದಿನಂತೆ ಟೋಲ್ ವಿನಾಯಿತಿ ಮುಂದುವರಿದಿದೆ.
ಈ ದರ ಏರಿಕೆಯಿಂದ ಪ್ರತಿದಿನ ಈ ಮಾರ್ಗಗಳಲ್ಲಿ ಸಂಚರಿಸುವ ಐಟಿ ಉದ್ಯೋಗಿಗಳು, ಖಾಸಗಿ ವಾಹನ ಸವಾರರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಇದಕ್ಕೆ ಸಾರ್ವಜನಿಕರಿಂದ ಅಸಮಾಧಾನವೂ ವ್ಯಕ್ತವಾಗುತ್ತಿದೆ.


