BBMP
Loading ...

BESCOM

Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ನಡೆಸಿದ ಪ್ರತಿಭಟನೆಯ ಪರಿಣಾಮ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆವಿಕಂ), ತುಮಕೂರು ವೃತ್ತಕ್ಕೆ ನಿಯೋಜನೆಗೊಂಡಿದ್ದ ಸಹಾಯಕ ನೌಕರ ದರ್ಶನ್ ಹೆಚ್.ಪಿ ಅವರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ.

‘ನಿಟ್ಟೂರಿನ ಸಿದ್ಧಲಿಂಗೇಶ್ವರ ಎಲೆಕ್ಟ್ರಿಕಲ್ಸ್‌ ಮಾಲೀಕ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಶಶಿಕುಮಾರ್‌ ಅವರಿಗೆ ದರ್ಶನ್‌ ನಿಂದಿಸಿದ್ದರು. ಅವಮಾನ ಮಾಡಿ, ಅಗೌರವದಿಂದ ನಡೆದುಕೊಂಡಿದ್ದರು. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಸಿ.ರಮೇಶ್‌ ಒತ್ತಾಯಿಸಿದರು. ಅಲ್ಲದೆ, ಸಂಘದ ಹೋರಾಟ ಸಮಿತಿ ಭಾರಿ ಪ್ರತಿಭಟನೆ ನಡೆಸಿತ್ತು.

ದರ್ಶನ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬೆಸ್ಕಾಂ ಹಿರಿಯ ಅಧಿಕಾರಿ ಮತ್ತು ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ವಿದ್ಯುತ್ ಗುತ್ತಿಗೆದಾರರು ಬೆಸ್ಕಾಂ ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರ ಕೆಲಸ ಸರಾಗವಾಗಿ ನಡೆಯಲು ಕಚೇರಿ ಅಧಿಕಾರಿಗಳು ಸಹಕರಿಸಬೇಕು. ಗುತ್ತಿಗೆದಾರರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಸಂಘ ಆಗ್ರಹಿಸಿತ್ತು.

ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ್‍ಕುಮಾರ್, ಪದಾಧಿಕಾರಿಗಳಾದ ಬೇವಿನಗುಡ್ಡಯ್ಯ, ಕೆ.ಎನ್.ರಾಮಕೃಷ್ಣಪ್ಪ, ದಾದಾಪೀರ್, ನಾಗರಾಜು, ಪ್ರಕಾಶ್‌ ಸೇರಿದಂತೆ ಸಂಘದ ಹೋರಾಟ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ಪರಿಣಾಮವಾಗಿ ದರ್ಶನ್​ ಅವರನ್ನು ಈ ಹಿಂದೆ 2025ರ ಫೆಬ್ರವರಿಯಲ್ಲಿ ಹೊರಡಿಸಲಾಗಿದ್ದ ಆದೇಶದನ್ವಯ, ಬೆಂಗಳೂರು ಪಶ್ಚಿಮ ವೃತ್ತದ ರಾಜರಾಜೇಶ್ವರಿನಗರ ವಿಭಾಗದ 6ನೇ ಪಶ್ಚಿಮ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದರ್ಶನ್ ಅವರನ್ನು ಒಂದು ವರ್ಷದ ಅವಧಿಗೆ ತುಮಕೂರು ವೃತ್ತದ ಕಚೇರಿಗೆ ನಿಯೋಜಿಸಲಾಗಿತ್ತು. ಆದರೆ, ಈಗ ಈ ನಿಯೋಜನೆಯನ್ನು ರದ್ದುಗೊಳಿಸಲಲಾಗಿದೆ.

Leave a Reply

Your email address will not be published. Required fields are marked *