Greater Bengaluru News9 : ರಾಜ್ಯ ಸರ್ಕಾರವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಜ್ಜಾಗಿದ್ದು, ನಾಳೆ ಭಾನುವಾರ (ಜುಲೈ 19, 2026) ಸಚಿವ ಸಂಪುಟದ ತುರ್ತು ಸಭೆಯನ್ನು ಕರೆಯಲಾಗಿದೆ. 2026ನೇ ಸಾಲಿನ 16ನೇ ಸಚಿವ ಸಂಪುಟ ಸಭೆ ಇದಾಗಿದ್ದು, ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವ ಸಂಪುಟ ಸಭಾಮಂದಿರದಲ್ಲಿ ನಾಳೆ ಮಧ್ಯಾಹ್ನ 3:00 ಗಂಟೆಗೆ ಸರಿಯಾಗಿ ಸಭೆ ಆರಂಭವಾಗಲಿದೆ. ಈ ಕುರಿತು ಸರ್ಕಾರದ ಅಪರ ಕಾರ್ಯದರ್ಶಿಗಳಾದ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಜುಲೈ 18ರಂದು ಅಧಿಕೃತ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.
ಯಾರೆಲ್ಲಾ ಭಾಗಿ?:
ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಂಪುಟದ ಎಲ್ಲಾ ಸಚಿವರು ಈ ಮಹತ್ವದ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಸಭೆಯ ಕಾರ್ಯಸೂಚಿಯನ್ನು (Agenda) ಸಚಿವರಿಗೆ ಪ್ರತ್ಯೇಕವಾಗಿ ಕಳುಹಿಸಿಕೊಡಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯದ ಪ್ರಮುಖ ಯೋಜನೆಗಳು, ಇಲಾಖಾವಾರು ಪ್ರಗತಿ ಪರಿಶೀಲನೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಈ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.


