BBMP
Loading ...

BESCOM

Greater Bengaluru News9 : ವರ್ಷದ ಹಿಂದೆಯೇ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ಇಲ್ಲದ ಕಾರಣ ಇದುವರೆಗೂ ವಿದ್ಯುತ್‌ ಸಂಪರ್ಕ ನೀಡಿಲ್ಲ. ಹೀಗಾಗಿ, ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದಿರುವ ಅಂದಾಜು ಮೂರೂವರೆ ಲಕ್ಷ ಗ್ರಾಹಕರು ಪ್ರತಿ ತಿಂಗಳು ದುಪ್ಪಟ್ಟು ಶುಲ್ಕ ‍ಪಾವತಿಸುವಂತಾಗಿದೆ.

ಗೃಹ ಬಳಕೆಯ ಗ್ರಾಹಕರು ತಾವು ಬಳಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ 5.80 ರೂ. ಪಾವತಿಸುತ್ತಾರೆ. ಆದರೆ, ತಾತ್ಕಾಲಿಕ ಸಂಪರ್ಕ ಪಡೆದಿರುವ ಗ್ರಾಹಕರು ಪ್ರತಿ ಯೂನಿಟ್‌ ವಿದ್ಯುತ್‌ಗೆ 10.50 ರೂ. ನೀಡಬೇಕು. ಅಲ್ಲದೆ ಕಾಯಂ ಸಂಪರ್ಕದಾರರಿಗೆ ಒಂದು ಕಿಲೋವಾಟ್‌ಗೆ 150 ರೂ. ನಿಗದಿತ ಶುಲ್ಕ ಇದ್ದರೆ, ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದಿರುವ ಗ್ರಾಹಕರು ಕಿಲೋವಾಟ್‌ಗೆ 200 ರೂ. ಶುಲ್ಕ ಕಟ್ಟಬೇಕು.

ಇದರ ಜೊತೆಗೆ ಯೂನಿಟ್‌ಗೆ 0.35 ಪೈಸೆ ಸರ್‌ಚಾರ್ಜ್‌ ಹಾಗೂ 0.25 ಪೈಸೆ ಇಂಧನ ಹೊಂದಾಣಿಕೆ ಶುಲ್ಕ ಪಾವತಿಸಬೇಕು. ಈ ಶುಲ್ಕಗಳೆಲ್ಲ ಸೇರಿದರೆ ತಾತ್ಕಾಲಿಕ ಸಂಪರ್ಕಕ್ಕೆ ಪ್ರತಿ ಯೂನಿಟ್‌ಗೆ ಸುಮಾರು 12 ರೂ.ಪಾವತಿಸಬೇಕು. ಇದು ತುಂಬಾ ದುಬಾರಿಯಾಗಿದ್ದು, ವಿದ್ಯುತ್‌ ಬಿಲ್‌ ಪಾವತಿಗಾಗಿಯೇ ತಿಂಗಳಿಗೆ ರೂ. 7 ಸಾವಿರದಿಂದ ರೂ. 8 ಸಾವಿರ ವೆಚ್ಚ ಮಾಡುತ್ತಿದ್ದೇವೆ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಹಕರು ಅಳಲು ತೋಡಿಕೊಂಡರು.

‘10 ಕಿಲೋವಾಟ್‌ ವಿದ್ಯುತ್‌ ಸಂಪರ್ಕ ಪಡೆದಿದ್ದರೆ, ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನಿಗದಿತ ಶುಲ್ಕ ಪಾವತಿಸಬೇಕು. 500 ಯೂನಿಟ್‌ ವಿದ್ಯುತ್‌ ಬಳಕೆ ಮಾಡಿದರೆ ಅದಕ್ಕೆ 5,250 ರೂ. ಪಾವತಿಸಬೇಕು. ಇದರೊಂದಿಗೆ ಹೊಂದಾಣಿಕೆ ವೆಚ್ಚ 125 ರೂ. ಹಾಗೂ ಸರ್‌ಚಾರ್ಜ್‌ 175 ರೂ. ಪಾವತಿಸಬೇಕು. ಇದೆಲ್ಲ ಸೇರಿ ಒಟ್ಟು 7,550 ರೂ. ಆಗುತ್ತದೆ. ಒಂದು ವೇಳೆ ಕಾಯಂ ಸಂಪರ್ಕ ನೀಡಿದ್ದರೆ ಒಟ್ಟು 3,700 ರೂ. ಬಿಲ್‌ ಬರುತ್ತಿತ್ತು’ ಎಂದು ಇಂದಿರಾನಗರದ ನಿವಾಸಿ ನಾಗರಾಜ್‌ ವಿವರಿಸಿದರು.

‘ಮನೆಯ ನಿರ್ಮಾಣ ಪೂರ್ಣ ಗೊಂಡಿದ್ದು, ಕಾಯಂ ವಿದ್ಯುತ್‌ ಸಂಪರ್ಕ ಪಡೆಯಲು ಹಣವನ್ನೂ ಪಾವತಿಸಿದ್ದೇವೆ. ಆದರೆ, ಒ.ಸಿ ಇಲ್ಲ ಎಂಬ ಕಾರಣಕ್ಕೆ ವಿದ್ಯುತ್‌ ಸಂಪರ್ಕ ನೀಡುತ್ತಿಲ್ಲ. ಅನಿವಾರ್ಯವಾಗಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನೇ ಅವಲಂಬಿಸಿದ್ದೇವೆ. ಆದರೆ, ಇದಕ್ಕೆ ನಿಗದಿಪಡಿಸಿರುವ ದರ ಹೆಚ್ಚಾಗಿದೆ. ಸುಮಾರು ಒಂದು ವರ್ಷದಿಂದ ದುಬಾರಿ ವಿದ್ಯುತ್‌ ಶುಲ್ಕ ಪಾವತಿಸುತ್ತಿದ್ದೇವೆ’ ಎಂದರು.

‘ಮನೆ ನಿರ್ಮಿಸುವಾಗ ತಾತ್ಕಾಲಿಕ ಸಂಪರ್ಕ ಪಡೆಯಲಾಗಿತ್ತು. ನಿರ್ಮಾಣ ಮುಕ್ತಾಯವಾಗುವ ವೇಳೆಗೆ ಕಾಯಂ ಸಂಪರ್ಕ ಪಡೆಯಲು ಅರ್ಜಿ ಜತೆ ಹಣ ಪಾವತಿಸಿದ್ದೇವೆ. ವಿದ್ಯುತ್‌ ಸಂಪರ್ಕ ನೀಡಲು ಒ.ಸಿ ಬೇಕು ಎಂದು ಕೇಳುತ್ತಿದ್ದಾರೆ. ಆದರೆ, ನಮ್ಮ ಬಳಿ ಒ.ಸಿ ಇಲ್ಲ. ಈಗ ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ’ ಎಂದು ಕೆ.ಆರ್‌.ಪುರದ ನಿವಾಸಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘2025ರ ನವೆಂಬರ್‌ ವೇಳೆಗೆ ವಿದ್ಯುತ್‌ ಸಂಪರ್ಕಕ್ಕಾಗಿ ಸಲ್ಲಿಸಿದ್ದ ಅರ್ಜಿಗಳ ಸಂಖ್ಯೆ 4.50 ಲಕ್ಷ ಇತ್ತು. 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯುವುದರಿಂದ ವಿನಾಯಿತಿ ನೀಡಿದ ಬಳಿಕ ಕೆಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಆದರೆ, ಇದರಿಂದ ಹೆಚ್ಚಿನ ಗ್ರಾಹಕರಿಗೆ ಉಪಯೋಗ ಆಗಿಲ್ಲ’ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬೆಸ್ಕಾಂ ವ್ಯಾಪ್ತಿಯಲ್ಲೇ ಅಧಿಕ
ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ 1,54,567 ಮನೆಗಳಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಬೆಸ್ಕಾಂ ವ್ಯಾಪ್ತಿಯಲ್ಲೇ ಹೆಚ್ಚು ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳಿವೆ.

ಸುಪ್ರೀಂ ಕೋರ್ಟ್‌ ಆದೇಶದಂತೆ 2025ರ ಏಪ್ರಿಲ್‌ನಿಂದ ನೀರು ಹಾಗೂ ವಿದ್ಯುತ್‌ ಸಂಪರ್ಕಕ್ಕೆ ಒ.ಸಿ ಕಡ್ಡಾಯಗೊಳಿಸಲಾಗಿದೆ. ವಿದ್ಯುತ್‌ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದವರ ಬಳಿ ಒ.ಸಿ ಇಲ್ಲದಿರುವುದರಿಂದ 13 ತಿಂಗಳಿಂದ ಹೊಸ ವಿದ್ಯುತ್‌ ಸಂಪರ್ಕ ನೀಡುವುದು ಬಹುತೇಕ ಸ್ಥಗಿತಗೊಂಡಿದೆ.

ಜಿಬಿಎ ವ್ಯಾಪ್ತಿಯಲ್ಲಿ 77,112 ಹಾಗೂ ಬೆಸ್ಕಾಂ ವ್ಯಾಪ್ತಿಯ ಉಳಿದ ಜಿಲ್ಲೆಗಳಲ್ಲಿ 77,455 ಮನೆಗಳಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಈ ಪೈಕಿ ಬಹುತೇಕ ಮನೆಗಳ ವಿಸ್ತೀರ್ಣ 1,200 ಚದರ ಅಡಿಗಿಂತ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *