Greater Bengaluru News9 : ಯುವಕನೊಬ್ಬ ಮೂರನೇ ಮಹಡಿಯಿಂದ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ ನಲ್ಲಿ ಇಂದು (ಅ.20) ಬೆಳಗ್ಗೆ ಸಂಭವಿಸಿದೆ.
ಬೆಳಗ್ಗೆ ಮಾಲ್ ತೆರೆಯುತ್ತಿದ್ದಂತೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾನೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯಕ್ಕೆ ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸದ್ಯ ಮಾಲ್ನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಒಳಗೆ ಬಾರದಂತೆ ಮಾಲ್ ಅನ್ನು ಮುಚ್ಚಲಾಗಿದೆ. ಮೃತಪಟ್ಟ ಯುವಕ ಆಯತಪ್ಪಿ ಕೆಳಗೆ ಬಿದ್ದನಾ? ಬೇಕು ಅಂತಾನೇ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡನಾ? ಅಥವಾ ಯಾರಾದರೂ ಕೆಳಗಡೆ ನೂಕಿದರಾ? ಎಂಬುದನ್ನು ತಿಳಿಯಲು ಪೊಲೀಸರು ಮಾಲ್ ಒಳಗಡೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಸದ್ಯ ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿ ಬರಬೇಕಿದೆ. ಈ ಹಿಂದೆಯೂ ಜಿಟಿ ಮಾಲ್ ವಿವಾದವೊಂದಕ್ಕೆ ಗುರಿಯಾಗಿತ್ತು. ಅದೇನೆಂದರೆ, ಪಂಚೆ ಧರಿಸಿ ಬಂದಿದ್ದ ರೈತನೊಬ್ಬನನ್ನು ಒಳಗಡೆ ಬಿಡದಿದ್ದಕ್ಕೆ ಮಾಲ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಬಳಿಕ ಮಾಲ್ಗೆ ಒಂದು ವಾರಗಳ ಕಾಲ ಬೀಗ ಕೂಡ ಜಡಿಯಲಾಗಿತ್ತು. ಇದೀಗ ಯುವಕನ ಸಾವಿನಿಂದಾಗ ಜಿಟಿ ಮಾಲ್ ಮತ್ತೆ ಸುದ್ದಿಯಾಗಿದೆ.


