BBMP
Loading ...

Rammurthy Nagar

Greater Bengaluru News9 : ತನ್ನೊಂದಿಗೆ ಸಂಬಂಧ ಬೆಳೆಸು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ಹಿಂದೆ ಬಿದ್ದು ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್​ ಠಾಣೆಯಲ್ಲೇ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮಹಿಳೆಯ ಮೇಲಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿಜೆ ಅವರು ದಾಖಲಿಸಿರುವ ದೂರಿನ ಪ್ರಕಾರ, ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಆಗಿ ಸತೀಶ್​ ಅವರು ಆಗಸ್ಟ್ 19ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ 30ರಂದು ಸತೀಶ್​ ಅವರ ಅಧಿಕೃತ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಪದೇಪದೆ ವಾಟ್ಸಾಪ್ ಕರೆಗಳು ಬರಲು ಆರಂಭಿಸಿತು.

ಕರೆ ಮಾಡಿದ ಮಹಿಳೆ ತನ್ನನ್ನು ರಾಮಮೂರ್ತಿ ನಗರದ ನಿವಾಸಿ ಸಂಜನಾ ಅಲಿಯಾಸ್ ವನಜಾ ಎಂದು ಪರಿಚಯಿಸಿಕೊಂಡು ಅಸಂಬದ್ಧವಾಗಿ ಮಾತನಾಡಲು ಆರಂಭಿಸಿದಳು. ಪ್ರೀತಿ ಮಾಡುತ್ತಿರುವುದಾಗಿ ಹೇಳಿ, ಈಗಲೇ ನಿಮ್ಮ ಉತ್ತರ ಹೇಳಬೇಕೆಂದು ಒತ್ತಾಯಿಸಿದಳು. ಆರಂಭದಲ್ಲಿ ಇದೆಲ್ಲ ತಮಾಷೆಗಾಗಿ ಮಾಡಿದ ಕರೆ ಇರಬಹುದು ಅಂತ ಇನ್ಸ್‌ಪೆಕ್ಟರ್ ಸತೀಶ್​ ಅವರು ನಿರ್ಲಕ್ಷಿಸಿದರು. ಆದರೆ, ಮಹಿಳೆಯ ಕರೆಗಳು ಮಾತ್ರ ಅಷ್ಟಕ್ಕೆ ನಿಲ್ಲಲಿಲ್ಲ.

ವನಜಾ ಎಂದು ಹೇಳಿಕೊಂಡ ಮಹಿಳೆ ವಿಭಿನ್ನ ಫೋನ್ ನಂಬರ್​ಗಳಿಂದ ಅನೇಕ ಬಾರಿ ಕರೆ ಮಾಡಿದಳು. ಆಕೆಯ ಟಾರ್ಚರ್​ ತಾಳಲಾರದೇ ಅಂತಿಮವಾಗಿ ಸತೀಶ್​ ಅವರು ಆಕೆಯ ಎಲ್ಲ ನಂಬರ್​ಗಳನ್ನು ಬ್ಲಾಕ್​ ಮಾಡಿದರು. ಇದಾದ ನಂತರ ಆಕೆ ಬೇರೊಂದು ನಂಬರ್​ನಿಂದ ಸತೀಶ್​ ಅವರನ್ನು ಸಂಪರ್ಕಿಸಿದಳು. ತಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಿಕೊಂಡು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ತನಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಳು. ಮೋಟಮ್ಮ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಿರಿಯ ನಾಯಕರ ಫೋಟೋಗಳನ್ನು ಕಳುಹಿಸಿದ್ದಲ್ಲದೆ, ತನ್ನ ಮನವಿಗಳಿಗೆ ಸ್ಪಂದಿಸದಿದ್ದರೆ ರಾಜಕೀಯ ಪ್ರಭಾವ ಬೀರುವುದಾಗಿ ಬೆದರಿಕೆ ಆಕೆ ಹಾಕಿದಳು ಎಂದು ಇನ್ಸ್​ಪೆಕ್ಟರ್​ ಸತೀಶ್​ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗೃಹ ಸಚಿವರ ಕಚೇರಿ ಮತ್ತು ಉಪಮುಖ್ಯಮಂತ್ರಿಗಳ ಕಚೇರಿಯಿಂದ ಇನ್ಸ್‌ಪೆಕ್ಟರ್ ಪ್ರಕರಣವನ್ನು ಏಕೆ ವಿಚಾರಣೆಗೆ ಒಳಪಡಿಸುತ್ತಿಲ್ಲ ಎಂದು ವಿಚಾರಿಸಿ ಕರೆಗಳು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕರೆ ಮಾಡಿದ ಮಹಿಳೆ ಯಾವುದೇ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಭೇಟಿ ನೀಡಿಲ್ಲ ಮತ್ತು ಅವಿವೇಕಿಯಾಗಿ ವರ್ತಿಸುತ್ತಿದ್ದಾಳೆ ಎಂದು ಇನ್ಸ್‌ಪೆಕ್ಟರ್ ಸತೀಶ್​ ಅವರು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯ ಹುಚ್ಚಾಟ ಇಷ್ಟಕ್ಕೆ ನಿಲ್ಲಲಿಲ್ಲ. ಇನ್ಸ್‌ಪೆಕ್ಟರ್ ಇಲ್ಲದಿದ್ದಾಗ ಆಕೆ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದಾಳೆ. ತಾನು ಇನ್ಸ್​ಪೆಕ್ಟರ್​ ಸಂಬಂಧಿ ಎಂದು ಹೇಳಿಕೊಂಡು, ಕಚೇರಿಯಲ್ಲಿ ಹೂವಿನ ಹೂಗುಚ್ಛ ಮತ್ತು ಸ್ವೀಟ್​ ಬಾಕ್ಸ್​ಗಳನ್ನು ಸಹ ಬಿಟ್ಟು ಹೋಗಿದ್ದಾಳೆ. ಈ ರೀತಿಯಾಗಿ ಯಾವುದೇ ವಸ್ತುಗಳನ್ನು ಕಳುಹಿಸದಂತೆ ದೂರವಾಣಿಯಲ್ಲಿ ಎಚ್ಚರಿಕೆ ನೀಡಿದ್ದರು ಕೂಡ ಆಕೆಯ ಕಿರುಕುಳ ಹಾಗೇ ಮುಂದುವರೆಯಿತು ಎಂದು ಸತೀಶ್​ ಅವರು ತಿಳಿಸಿದ್ದಾರೆ.

2025, ನವೆಂಬರ್ 7ರಂದು, ಸಾರ್ವಜನಿಕ ದೂರುಗಳನ್ನು ಆಲಿಸುತ್ತಿರುವ ಸಮಯದಲ್ಲೇ ಇನ್ಸ್‌ಪೆಕ್ಟರ್ ಕಚೇರಿಗೆ ಪ್ರವೇಶಿಸಿದ ಮಹಿಳೆ, ಅವರಿಗೆ ಒಂದು ಲಕೋಟೆಯನ್ನು ನೀಡಿದಳು. ಅದನ್ನು ತೆಗೆದು ನೋಡಿದಾಗ ಒಳಗೆ ಮೂರು ಪತ್ರಗಳು ಮತ್ತು “ನೆಕ್ಸಿಟೊ ಪ್ಲಸ್” (20 ಮಾತ್ರೆಗಳು) ಎಂದು ಲೇಬಲ್ ಮಾಡಲಾದ ಮಾತ್ರೆಗಳು ಇದ್ದವು. ಆ ಪತ್ರಗಳಲ್ಲಿ ಪ್ರೇಮ ನಿವೇದನೆ ಮಾಡಲಾಗಿತ್ತು. ಅಲ್ಲದೆ, ಪ್ರೀತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಲಾಗಿತ್ತು. ನನ್ನ ಸಾವಿಗೆ ಇನ್ಸ್‌ಪೆಕ್ಟರ್‌ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದಳು.

ಒಂದು ಪತ್ರದಲ್ಲಂತೂ ಹೃದಯದ ಚಿಹ್ನೆಯ ಜತೆಗೆ “ಚಿನ್ನಿ ನಿನ್ನನ್ನು ಪ್ರೀತಿಸುತ್ತಾಳೆ, ನೀನು ನನ್ನನ್ನು ಪ್ರೀತಿಸಬೇಕು” ಎಂದು ರಕ್ತದಲ್ಲಿ ಬರೆಯಲಾಗಿತ್ತು. ಮಹಿಳೆ ಆ ಪತ್ರವನ್ನು ತನ್ನ ಸ್ವಂತ ರಕ್ತದಿಂದ ಬರೆದಿರುವುದಾಗಿ ಹೇಳಿಕೊಂಡಿದ್ದಾಳೆ. ತಾನೊಬ್ಬ ಸಾರ್ವಜನಿಕ ಸೇವಕನಾಗಿದ್ದು, ತನ್ನ ಅಧಿಕೃತ ಸಂಖ್ಯೆಗೆ ಪದೇಪದೆ ಕರೆ ಮಾಡುವುದರಿಂದ ಸಾರ್ವಜನಿಕ ಸೇವೆಗೆ ಅಡ್ಡಿಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರೂ ಅದಕ್ಕೆ ಕ್ಯಾರೆ ಎನ್ನದ ಮಹಿಳೆ ತನ್ನನ್ನು ಪ್ರೀತಿಸಬೇಕೆಂದು ಒತ್ತಾಯಿಸುತ್ತಲೇ ಇದ್ದಾಳೆ ಎಂದು ಸತೀಶ್​ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಆ ಮಹಿಳೆ ಈ ಹಿಂದೆ ಇದೇ ರೀತಿಯ ವರ್ತನೆ ತೋರಿರುವುದು ಕಂಡುಬಂದಿದೆ. ಇದೇ ರೀತಿ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳನ್ನು ಆಕೆ ಗುರಿಯಾಗಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ವಿಶೇಷ ವರದಿ ಸಹ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಒಂದು ಪೊಲೀಸ್ ತಂಡವು ಕೌನ್ಸೆಲಿಂಗ್‌ಗಾಗಿ ಆಕೆಯ ಮನೆಗೆ ಭೇಟಿ ನೀಡಿತು. ಆದರೆ, ಆಕೆ ಸಹಕರಿಸಲಿಲ್ಲ ಮತ್ತು ಆಕೆಯ ಕುಟುಂಬ ಸದಸ್ಯರು ಸಹ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು ಎಂದು ವರದಿಯಾಗಿದೆ.

ಇನ್ನು 2025, ಡಿಸೆಂಬರ್ 12 ರಂದು ಆ ಮಹಿಳೆ ಮತ್ತೆ ಪೊಲೀಸ್ ಠಾಣೆಗೆ ಬಂದು, ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾಳೆ. ಅಲ್ಲದೆ, ಇನ್ಸ್​ಪೆಕ್ಟರ್​ ಉತ್ತರ ತಿಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು. ಒಂದು ವೇಳೆ ಪ್ರೀತಿಯನ್ನು ನಿರಾಕರಿಸಿದರೆ ಸತೀಶ್​ ಅವರ ಖ್ಯಾತಿಗೆ ಹಾನಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿದೆ. ಮಹಿಳೆಯ ನಿರಂತರ ಕಿರುಕುಳದಿಂದ ಬೇಸತ್ತ ಇನ್ಸ್‌ಪೆಕ್ಟರ್ ಸತೀಶ್ ಔಪಚಾರಿಕ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಆತ್ಮಹತ್ಯಾ ಬೆದರಿಕೆಗಳಿಗೆ ಸಂಬಂಧಿಸಿದ ಆರೋಪಗಳ ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *