BBMP
Loading ...

DKS

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದು ಕೆಲವೇ ದಿನಗಳಾಗುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್​ನಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗತೊಡಗಿದೆ. ಇದರೊಂದಿಗೆ, ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡಿವೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ವಿವಿಧ ಸಮುದಾಯಗಳ ಮುಖಂಡರ ಆಗ್ರಹ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಶುರುವಾಗಿರುವ ಚರ್ಚೆ ಹಾಗೂ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.

ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದಕ್ಕಾಗಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಕೆಲವು ದಿನಗಳ ಹಿಂದೆ ಸಚಿವ ಕೆಎನ್ ರಾಜಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಸತೀಶ್ ಜಾರಕಿಹೊಳಿ ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದರು. ಆದರೆ, ರಾಜಣ್ಣ ಹೇಳಿಕೆಯ ಬೆನ್ನಲ್ಲೇ ಆ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ಜೋರಾಗತೊಡಗಿತು. ಈ ಹಿಂದೆ ಬಿಜೆಪಿ ಕೂಡ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಸಲುವಾಗಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿತ್ತು. ಅಧಿಕಾರ ಹಂಚಿಕೆ ವಿಚಾರಕ್ಕೆ ಬಂದಾಗ ಎಲ್ಲ ಸಮುದಾಯಗಳಿಗೂ ಅವಕಾಶ ನೀಡಬೇಕು. ಆಗ ಎಲ್ಲರಿಗೂ ಪಕ್ಷದಲ್ಲಿ ವಿಶ್ವಾಸ ಮೂಡುತ್ತದೆ. ಕೆಲವೇ ಜನ ಅಧಿಕಾರ ಅನುಭವಿಸಿ ಇತರರಿಗೆ ನೀಡದೇ ಇದ್ದಾಗ ಆ ಪಕ್ಷದ ಬಗ್ಗೆ ಪ್ರೀತಿ ಆ ಸಮುದಾಯದ ಜನರಲ್ಲಿ ಪ್ರೀತಿ ಕಡಿಮೆಯಾಗುತ್ತದೆ ಎಂದು ರಾಜಣ್ಣ ಹೇಳಿದ್ದರು.

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡ ಕೆಲವು ನಾಯಕರು ಅದಕ್ಕೆ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಯಾಕಂದರೆ, ಹೆಚ್ಚುವರಿ ಡಿಸಿಎಂ ಬೇಕೆಂದು ಪಟ್ಟುಹಿಡಿದವರಲ್ಲಿ ಬಹುತೇಕರು ಸಿಎಂ ಸಿದ್ದರಾಮಯ್ಯ ಆಪ್ತರೇ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆಗೆ ಶಾಸಕ ಮಾಗಡಿ ಬಾಲಕೃಷ್ಣ, ಮಾಜಿ ಸಂಸದ ಡಿಕೆ ಸುರೇಶ್ ಸೇರಿ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.

ಈ ಮಧ್ಯೆ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಶಾಸಕ ಬಸವರಾಜ್ ಶಿವಗಂಗಾ ಬಹಿರಂಗ ಹೇಳಿಕೆ ನೀಡಿದರು. ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ, ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ್ದ ಅವರು, ಕೆಪಿಸಿಸಿ ಅಧ್ಯಕ್ಷರಾಗಿದ್ದವರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ ಪದ್ಧತಿ. ಹೆಚ್ಚುವರಿ ಡಿಸಿಎಂ ಆಯ್ಕೆ ಮಾಡುವುದೇ ಆದರೆ, ಡಿಕೆ ಶಿವಕುಮಾರ್​ರನ್ನು ಮುಖ್ಯಮಂತ್ರಿ ಮಾಡಿ, ಆಮೇಲೆ ಹತ್ತು ಡಿಸಿಎಂ ಬೇಕಾದರೂ ಮಾಡಿಕೊಳ್ಳಲಿ ಎಂದಿದ್ದರು. ಅಷ್ಟೇ ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಲೀಡ್ ತಂದುಕೊಡದ ಸಚಿವರನ್ನು ಸ್ಥಾನದಿಂದ ಕೈಬಿಡಲಿ ಎಂದು ಆಗ್ರಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಮೊದಲ ಎರಡೂವರೆ ವರ್ಷ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ. ನಂತರದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗಿರಲಿದ್ದಾರೆ ಎಂಬ ವದಂತಿ ಕಳೆದ ವರ್ಷದಿಂದಲೂ ಚಾಲ್ತಿಯಲ್ಲಿದೆ. ಆದರೆ, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನಾಯಕರಾಗಲಿ, ಸಂಬಂಧಪಟ್ಟ ನಾಯಕರಾಗಲಿ ಅಧಿಕೃತ ಹೇಳಿಕೆಯನ್ನು ಈವರೆಗ ನೀಡಿಲ್ಲ. ಆದರೆ, ಕಾಂಗ್ರೆಸ್ ಆಂತರಿಕ ವಲಯದಲ್ಲಿ ಈ ಗುಸುಗುಸು ಇದ್ದೇ ಇದೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಖುದ್ದು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದರು. ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಯಾರೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದರು. ಬಹಿರಂಗ ಹೇಳಿಕೆಗಳಿಂದ ಸರ್ಕಾರ, ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡಲೇಬಾರದು ಎಂದು ಅವರು ತಾಕೀತು ಮಾಡಿದರು. ಹೆಚ್ಚುವರಿ ಡಿಸಿಎಂ ಹುದ್ದೆ ಸಂಬಂಧಿತ ಚರ್ಚೆಯ ಮಧ್ಯದಲ್ಲೇ, ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೂ ಪಕ್ಷದ ನಾಯಕರ ಒಂದು ಬಣ ಪಟ್ಟು ಹಿಡಿಯಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಅಸಲಿಗೆ, ಹೆಚ್ಚುವರಿ ಡಿಸಿಎಂ ಬೇಡಿಕೆ ಹಿಂದಿನ ಅಸಲಿಯತ್ತೇ ಅಧ್ಯಕ್ಷಗಿರಿ ಬದಲಾವಣೆ ಎಂದು ಕಾಂಗ್ರೆಸ್​ನ ಕೆಲವು ಮೂಲಗಳು ಹೇಳಿವೆ. ಮೂಲಗಳ ಪ್ರಕಾರ, ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಿ ಎನ್ನುತ್ತಿರುವ ನಾಯಕರು ಹೆಚ್ಚು ಡಿಸಿಎಂ ಕೇಳಿದರೆ, ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ.

ಒನ್ ಮ್ಯಾನ್ ಒನ್ ಪೋಸ್ಟ್ ಎಂಬ ಅಜೆಂಡಾ ಮೂಲಕ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಕಟ್ಟಿ ಹಾಕಬೇಕು ಎಂಬುದು ತೆರೆಮರೆಯ ಕಸರತ್ತು ಎನ್ನಲಾಗಿದೆ. ಕಾಂಗ್ರೆಸ್​​ಗೆ ಮತ ಹಾಕಿದ ಸಮುದಾಯಕ್ಕೆ ಅಧಿಕಾರ ನೀಡಿ, ವೋಟು ಕೊಡದ ಸಮುದಾಯದ ನಾಯಕರಿಗೆ ಪಕ್ಷದಲ್ಲಿ ಮಣೆ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಕೈಹಿಡಿದಿಲ್ಲ. ದಲಿತ, ಮುಸ್ಲಿಂ, ಹಿಂದುಳಿದ ಮತಗಳು ಹೆಚ್ಚು ಕಾಂಗ್ರೆಸ್​ಗೆ ಬಂದಿವೆ. ಈ ಸಮುದಾಯದ ನಾಯಕರಿಗೆ ಹೆಚ್ಚು ಅಧಿಕಾರ ನೀಡಬೇಕೆಂಬ ಕೂಗು ಒಂದು ವರ್ಗದ ನಾಯಕರದ್ದಾಗಿದೆ.

ಏತನ್ಮಧ್ಯೆ, ಅಧ್ಯಕ್ಷರ ಬದಲಾವಣೆ ಮಾಡುವುದೇ ಆದರೆ ಲಿಂಗಾಯತ ಸಮುದಾಯಕ್ಕೆ ಅವಕಾಶ ನೀಡಿ ಎಂದು ಅತ್ತ ವಿನಯ್ ಕುಲಕರ್ಣಿ ನೇತೃತ್ವದ ಶಾಸಕರ ನಿಯೋಗ ಆಗ್ರಹಿಸಿದೆ. ಈ ವಿಚಾರವಾಗಿ ನಿಯೋಗವು ಕೆಲವು ದಿನ ಹಿಂದಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಕೂಡ ಭೇಟಿ ಮಾಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ನೀಡಿದ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಯಿತು. ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್​​ಗೆ ಬಿಟ್ಟುಕೊಡುವಂತೆ ಬಹಿರಂಗವಾಗಿಯೇ ಅವರು ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ಇದಕ್ಕೆ ನಂತರ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಸಾಲ ಮಾಡಿ ತುಪ್ಪ ತಿನ್ನೋಕೆ ಹೊರಟ ಪಾಲಿಕೆ: ವಿಶ್ವ ಬ್ಯಾಂಕ್ ಮುಂದೆ ಕೈ ಚಾಚಿದ ಬಿಡಬ್ಲ್ಯುಎಸ್​ಎಸ್​ಬಿ, ಬಿಬಿಎಂಪಿ

Leave a Reply

Your email address will not be published. Required fields are marked *