BBMP
Loading ...

GBA

Greater Bengaluru News9 : ಸಿಲಿಕಾನ್ ಸಿಟಿಯಲ್ಲಿ ಕಣ್ಣಿಗೆ ಕಂಡಲ್ಲೆಲ್ಲಾ ಕಸ ಚೆಲ್ಲಿ, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ ಖಾಲಿ ನಿವೇಶನಗಳ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗಿ ಕಾನೂನಿನ ಬಿಸಿ ಮುಟ್ಟಿಸಲು ಮುಂದಾಗಿದೆ.

ಮಾಲೀಕರು ಸ್ವಯಂಪ್ರೇರಿತರಾಗಿ ಜಾಗ ಸ್ವಚ್ಛಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಇದೇ ಗುರುವಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಧಿಕಾರವೇ ನೇರವಾಗಿ ಸ್ವಚ್ಛತಾ ಕಾರ್ಯಾಚರಣೆ ಆರಂಭಿಸಲಿದೆ. ಸ್ವಚ್ಛತೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಮಾಲೀಕರ ಆಸ್ತಿ ತೆರಿಗೆಯಲ್ಲೇ (Property Tax) ಸೇರಿಸಿ ವಸೂಲಿ ಮಾಡಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಕುರಿತು ಸೋಮವಾರ ನಡೆದ ಉನ್ನತ ಮಟ್ಟದ ವರ್ಚುವಲ್ ಸಭೆಯಲ್ಲಿ ಸಚಿವರು ಪ್ರಗತಿ ಪರಿಶೀಲನೆ ನಡೆಸಿದರು.

ಬೆಂಗಳೂರನ್ನು ಕಸಮುಕ್ತವಾಗಿಸಲು ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದ ಅಡಿಯಲ್ಲಿ, ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಆಗಸ್ಟ್ 22ರವರೆಗೆ ಅಂತಿಮ ಗಡುವು ನೀಡಲಾಗಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ನೀಡಿದ ಈ ಅವಕಾಶವನ್ನು ನಿವೇಶನ ಮಾಲೀಕರು ಸರಿಯಾಗಿ ಬಳಸಿಕೊಂಡಿಲ್ಲ. ನಗರದಲ್ಲಿರುವ ಒಟ್ಟು ಖಾಲಿ ನಿವೇಶನಗಳ ಪೈಕಿ ಕೇವಲ ಶೇಕಡಾ 20 ರಷ್ಟು ಮಾಲೀಕರು ಮಾತ್ರ ತಮ್ಮ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಉಳಿದ ಶೇ. 80 ರಷ್ಟು ನಿವೇಶನಗಳು ಇನ್ನೂ ಕಸ, ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ಮುಳ್ಳಿನ ಗಿಡಗಳಿಂದ ತುಂಬಿ ಸಾರ್ವಜನಿಕರಿಗೆ ಕಂಟಕವಾಗಿವೆ.

ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಲಿ ನಿವೇಶನಗಳನ್ನು ಗುರುತಿಸಿ ತಕ್ಷಣವೇ ಪಟ್ಟಿ ಮಾಡಲಿದ್ದಾರೆ. ಈ ಪಟ್ಟಿಯ ಆಧಾರದ ಮೇಲೆ ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರು ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ, ನಿವೇಶನಗಳ ಬಳಿ ಕಡ್ಡಾಯವಾಗಿ ನೋಟೀಸ್ ಅಂಟಿಸಲಿದ್ದಾರೆ.

‘Clear it’ ಆ್ಯಪ್‌ನಲ್ಲಿ ನಿಗಾ
ಸ್ವಚ್ಛತಾ ಕಾರ್ಯದ ಪಾರದರ್ಶಕತೆಗಾಗಿ ಮತ್ತು ನಿವೇಶನಗಳ ಮೇಲ್ವಿಚಾರಣೆಗಾಗಿ ವಿಶೇಷವಾಗಿ ರೂಪಿಸಲಾಗಿರುವ ’Clear it’ ತಂತ್ರಾಂಶವನ್ನು (Software) ಬಳಸಲಾಗುತ್ತದೆ. ನಿವೇಶನದ ಸ್ವಚ್ಛತೆಗೆ ಮುನ್ನ ಹಾಗೂ ಸ್ವಚ್ಛತೆಯ ನಂತರದ ಸಂಪೂರ್ಣ ಮಾಹಿತಿ ಮತ್ತು ಫೋಟೋಗಳನ್ನು ಈ ಆ್ಯಪ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಲಾಗುತ್ತದೆ.

25,900 ರಿಂದ 26,900 ರೂ. ವರೆಗೆ ವೆಚ್ಚ
ಈ ಹಿಂದೆ ಜಿಬಿಎ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ, ನಿರ್ಲಕ್ಷ್ಯ ವಹಿಸುವ ಮಾಲೀಕರಿಗೆ ಭಾರಿ ಆರ್ಥಿಕ ನಷ್ಟ ಕಾದಿದೆ. ಪಾಲಿಕೆಯೇ ಜೆಸಿಬಿ ಬಳಸಿ ನಿಮ್ಮ ಜಾಗವನ್ನು ಸ್ವಚ್ಛಗೊಳಿಸಿದರೆ, ಕನಿಷ್ಠ 1,200 ಚದರ ಅಡಿ (30×40) ವಿಸ್ತೀರ್ಣದ ನಿವೇಶನಕ್ಕೆ 25,900 ರೂ.ನಿಂದ 26,900 ರೂ. ವರೆಗೆ ವೆಚ್ಚ ನಿಗದಿಪಡಿಸಲಾಗಿದೆ. ಕಸ ಮತ್ತು ಕಟ್ಟಡ ತ್ಯಾಜ್ಯದ ಪ್ರಮಾಣ ಹೆಚ್ಚಿದ್ದರೆ ಈ ವೆಚ್ಚವು 1.74 ಲಕ್ಷ ರೂ.ವರೆಗೂ ತಲುಪಬಹುದು. ಪಾಲಿಕೆ ಒಮ್ಮೆ ಸ್ವಚ್ಛಗೊಳಿಸಿದ ನಂತರವೂ ಮಾಲೀಕರು ಜಾಗಕ್ಕೆ ತಡೆಗೋಡೆ ಅಥವಾ ಬೇಲಿ ಹಾಕದೆ ಹಾಗೇ ಬಿಟ್ಟರೆ, ಮತ್ತು ಅಲ್ಲಿ ಮತ್ತೆ ಕಸ ಸಂಗ್ರಹವಾದರೆ ‘ಮರು ಉಲ್ಲಂಘನೆ’ ನಿಯಮದಡಿ 50,000 ರೂ.ನಿಂದ 1 ಲಕ್ಷ ರೂ.ವರೆಗೆ ಹೆಚ್ಚುವರಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆಗಸ್ಟ್‌ 1ರಿಂದ ಆರಂಭವಾಗಿದ್ದು, ಆಗಸ್ಟ್‌ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಜುಲೈ 14ರಂದು ತಿಳಿಸಿದ್ದರು. ಅದರಂತೆ ಶುಲ್ಕ ನಿಗದಿ ಮಾಡಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಆಗಸ್ಟ್‌ 10ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು. ಆಗಸ್ಟ್‌ 12ರಂದು ಗಡುವು ವಿಸ್ತರಿಸಿ, ಆಗಸ್ಟ್‌ 22ರವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕೇವಲ 20 ರಷ್ಟು ಮಾಲೀಕರು ಮಾತ್ರ ತಮ್ಮ ನಿವೇಶನ ಸ್ವಚ್ಛಗೊಳಿಸಿದ್ದಾರೆ.

Leave a Reply

Your email address will not be published. Required fields are marked *