BBMP
Loading ...

BESCOM

Greater Bengaluru News9 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ಹೈಟೆನ್ಷನ್ (ಎಚ್.ಟಿ) ವಿದ್ಯುತ್ ಸಂಪರ್ಕದ ಗ್ರಾಹಕರ ಅನುಕೂಲಕ್ಕಾಗಿ ಸ್ವಯಂಚಾಲಿತ ವ್ಯವಸ್ಥೆಯ ‘ಎಚ್‌ ಟಿ ಮಿತ್ರ’ ಪೋರ್ಟಲ್ ಆರಂಭಿಸಲಾಗಿದ್ದು, ವಿದ್ಯುತ್ ಸಂಬಂಧಿತ ಸೇವೆಗಳ ಕೋರಿಕೆ ಹಾಗೂ ದೂರುಗಳ ತ್ವರಿತ ಪರಿಹಾರಕ್ಕೆ ಈ ಪೋರ್ಟಲ್ ಪರಿಣಾಮಕಾರಿ ಡಿಜಿಟಲ್ ವೇದಿಕೆಯಾಗಲಿದೆ.

ಬೆಸ್ಕಾಂ ವ್ಯಾಪ್ತಿಯ ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರ ವಿದ್ಯುತ್ ಸಂಬಂಧಿತ ಸೇವೆಗಳನ್ನು ಆನ್‌ಲೈನ್ ಮೂಲಕ ತ್ವರಿತವಾಗಿ ಪರಿಹರಿಸಲು ಎಚ್‌ಟಿ ಮಿತ್ರ ಪೋರ್ಟಲ್ ನೆರವಾಗಲಿದ್ದು, ಇನ್ನು ಮುಂದೆ ಗ್ರಾಹಕರು ಸಮಸ್ಯೆ ಪರಿಹಾರಕ್ಕಾಗಿ ಬೆಸ್ಕಾಂ ಕಚೇರಿಗಳಿಗೆ ಅಲೆಯುವ ತೊಂದರೆ ತಪ್ಪಲಿದೆ. ನೂತನ ಸೇವೆಯಿಂದ 18 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲವಾಗಲಿದ್ದು, ವಿದ್ಯುತ್ ಸಂಬಂಧಿತ ದೂರುಗಳ ನಿರ್ವಣೆಯಲ್ಲಿನ ವಿಳಂಬ ತಪ್ಪಲಿದೆ.

ಈ ಹಿಂದೆ ಎಚ್.ಟಿ ಸಂಪರ್ಕದ ಗ್ರಾಹಕರು ದೂರು ದಾಖಲಿಸಲು ಬೆಸ್ಕಾಂನ 1912 ಸಹಾಯವಾಣಿಗೆ ಕರೆ ಮಾಡಬೇಕಿತ್ತು. ಇಲ್ಲವೇ, ಖುದ್ದು ಬೆಸ್ಕಾಂ ಕಚೇರಿಗಳಿಗೆ ಹೋಗಬೇಕಿತ್ತು. ಮತ್ತೊಂದೆಡೆ ಗ್ರಾಹಕರಿಗೆ ತಮ್ಮ ದೂರಿನ ನೈಜ ಸಮಯದ ಟ್ರ್ಯಾಕಿಂಗ್ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಗ್ರಾಹಕರು ಸಮಸ್ಯೆ ಪರಿಹಾರಕ್ಕೆ ದಿನಗಟ್ಟಲೆ ಕಾಯುವ ಪರಿಸ್ಥಿತಿಯಿತ್ತು. ಎಚ್‌ಟಿ ಮಿತ್ರ ಪೋರ್ಟಲ್ ಈ ಎಲ್ಲಾ ಕೊರತೆಗಳನ್ನು ನೀಗಿಸಲಿದ್ದು, ದೂರು ಪ್ರಕ್ರಿಯೆಯನ್ನು ಡಿಜಿಟಲ್ ವೇದಿಕೆಯಡಿ ಸಂಯೋಜಿಸುತ್ತದೆ. ಗ್ರಾಹಕರು ಪೋರ್ಟಲ್‌ನಲ್ಲಿ ಲಾಗಿನ್ ಆಗಿ, ದೂರುದಾಖಲಿಸಿದ ಕೂಡಲೇ ಆರೇಳು ತಾಸುಗಳಲ್ಲಿ ಬೆಸ್ಕಾಂ ಸಿಬ್ಬಂದಿ ದೂರು ಪರಿಶೀಲಿಸಿ ಸಮಸ್ಯೆ ಪರಿಹರಿಸುತ್ತಾರೆ.

ನೋಂದಣಿ ಸರಳ-ಸುಲಭ
ಗ್ರಾಹಕರು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಬೆಸ್ಕಾಂನ ಅಧಿಕೃತ ವೆಬ್‌ಸೈಟ್‌ ಮೂಲಕ ಎಚ್ ಟಿ ಮಿತ್ರ ಪೋರ್ಟಲ್‌ಗೆ ಲಾಗಿನ್ ಆಗಬಹುದು. ತಮ್ಮ ಎಚ್ ಟಿ ಗ್ರಾಹಕರ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಪಾಸ್ ವರ್ಡ್ ಅಥವಾ ఒటి ಮೂಲಕ ಸುಲಭವಾಗಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಬಹುದು. ಲಾಗಿನ್ ಆದ ತಕ್ಷಣ ಡ್ಯಾಶ್‌ಬೋರ್ಡ್‌ನಲ್ಲಿ ಗ್ರಾಹಕರ ವಿವರ, ಬಿಲ್ ವಿವರ ದೊರೆಯಲಿದೆ. ಡ್ಯಾಶ್ ಬೋರ್ಡ್ ಮೂಲಕ ವಿದ್ಯುತ್ ಸಂಬಂಧಿತ ದೂರುಗಳನ್ನು ದಾಖಲಿಸಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳು, ಐಟಿ-ಬಿಟಿ ಉದ್ಯಮ, ವಾಣಿಜ್ಯ ಸಂಕೀರ್ಣಗಳನ್ನು ನಡೆಸುವ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯು ಸಕಾಲಿಕವಾಗಿ ಪರಿಹಾರ ಒದಗಿಸುತ್ತದೆ.

ಪೋರ್ಟಲ್ ವೈಶಿಷ್ಟ್ಯಗಳು

  • ಗ್ರಾಹಕರು-ಬೆಸ್ಕಾಂ ಅಧಿಕಾರಿಗಳ ನಡುವೆ ನೇರ ಸಂವಹನ
  • ದೂರು ನಿರ್ವಹಣೆಯ ಪ್ರತಿ ಹಂತದಲ್ಲೂ ಗ್ರಾಹಕರಿಗೆ ಸ್ವಯಂಚಾಲಿತ ಸಂದೇಶ ರವಾನೆ
  • ದೂರುಗಳ ಪರಿಣಾಮಕಾರಿ ನಿರ್ವಹಣೆಗಾಗಿ ಕ್ಷೇತ್ರ ಅಧಿಕಾರಿಗಳಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ
  • ದೂರಿನ ಸ್ಥಿತಿಗತಿಯ ಟ್ರ್ಯಾಕಿಂಗ್ ಹಾಗೂ ವರದಿ ವೀಕ್ಷಣೆಗೆ ಅವಕಾಶ
  • ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನ (ಎಸ್‌ಪಿ) ಪಾಲನೆ
  • ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ಪೋರ್ಟಲ್‌ನ ಕೇಂದ್ರೀಕೃತ ಡ್ಯಾಶ್ ಬೋರ್ಡ್ ಮೇಲ್ವಿಚಾರಣೆ
  • ಸಮಸ್ಯೆ ಪರಿಹರಿಸುವುದು ವಿಳಂಬವಾದಾಗ ಎಚ್ಚರಿಕೆ ಸಂದೇಶ ರವಾನೆ ಮತ್ತು ಹೊಣೆಗಾರಿಕೆಯ ಖಾತ್ರಿ

ಕಾಗದರಹಿತ ಸೇವೆ
ಎಚ್‌ಟಿ ಮಿತ್ರ ಪೋರ್ಟಲ್ ವ್ಯವಸ್ಥೆಯು ಕಾಗದರಹಿತ ಸೇವೆಗೆ ಒತ್ತು ನೀಡಲಿದ್ದು, ದೂರು ಸಲ್ಲಿಕೆಯಿಂದ ಪರಿಹಾರದವರೆಗೆ ಪೂರ್ಣ ಪಾರದರ್ಶಕತೆ ಒದಗಿಸಲಿದೆ. ವಿದ್ಯುತ್‌ ವ್ಯತ್ಯಯ , ಬಿಲ್ಲಿಂಗ್ ಸಮಸ್ಯೆ ಅಥವಾ ತಾಂತ್ರಿಕ ದೋಷಗಳ ಕುರಿತು ಗ್ರಾಹಕರು, ಬೆಸ್ಕಾಂ ಕಚೇರಿಗಳಿಗೆ ಹೋಗದೆ ಯಾವುದೇ ಸಮಯದಲ್ಲಿ ಪೋರ್ಟಲ್ ಮೂಲಕ ಬೆರಳ ತುದಿಯಲ್ಲೇ ದೂರು ದಾಖಲಿಸಬಹುದು. ಬಳಿಕ ದೂರಿನ ಸಂಬಂಧ ಈ ಅಪ್ಲಿಕೇಶನ್ನಿಂದಲೇ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್ ರವಾನೆಯಾಗುತ್ತದೆ.

ಗ್ರಾಹಕರು, ಬೆಸ್ಕಾಂನ ಕ್ಷೇತ್ರಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ಈ ಪೋರ್ಟಲ್ ನೆರವಾಗಲಿದೆ. ನಿಗಮದ ಹಿರಿಯ ಅಧಿಕಾರಿಗಳು ಪೋರ್ಟಲ್‌ನಲ್ಲಿ ದಾಖಲಾದ ದೂರುಗಳ ಮೇಲೆ ನಿಗಾ ವಹಿಸಿ, ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸುವಂತೆ ಕ್ಷೇತ್ರಾಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಕ್ಷೇತ್ರಾಧಿಕಾರಿಗಳು ತಮಗೆ ವಹಿಸಲಾದ ದೂರುಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು. ದೂರುಗಳ ಸಂಬಂಧ ಯಾರು, ಯಾವ ಕ್ರಮ ವಹಿಸಿದ್ದಾರೆ ಎಂಬ ಮಾಹಿತಿ ಹಿರಿಯ ಅಧಿಕಾರಿಗಳಿಗೆ ಪೋರ್ಟಲ್‌ನಲ್ಲಿ ನೇರವಾಗಿ ಸಿಗಲಿದೆ.

ಎಚ್.ಟಿ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ನಿವಾರಣೆಗೆ ಎಚ್ ಟಿ ಮಿತ್ರ ಪೋರ್ಟಲ್ ತ್ವರಿತ ಮತ್ತು ಪಾರದರ್ಶಕ ಸೇವೆ ನೀಡಲಿದೆ. ಜತೆಗೆ, ಗ್ರಾಹಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಬೆಸ್ಕಾಂ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಮುಂದೆ ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಎಸ್ಕಾಂಗಳಿಗೂ ವಿಸ್ತರಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

“ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಬಹುತೇಕ ಎಚ್‌ಟಿ ಗ್ರಾಹಕರು ಪೋರ್ಟಲ್‌ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೋರ್ಟಲ್‌ನಿಂದ ಎಚ್‌ಟಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಉದ್ದೇಶ ಸಫಲವಾಗಲಿದೆ. ಜತೆಗೆ, ಸಿಬ್ಬಂದಿಯ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *