BBMP
Loading ...

Emmission Test

Greater Bengaluru News9: ಕರ್ನಾಟಕದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಇಂಧನ ಬೆಲೆ ಹಾಗೂ ಪಾರ್ಕಿಂಗ್ ಶುಲ್ಕದ ಬೆನ್ನಲ್ಲೇ, ರಾಜ್ಯದ ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಇನ್ನು ಮುಂದೆ ಅಧಿಕ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಕಾರ್ಯಾಚರಣೆ ವೆಚ್ಚ, ವಿದ್ಯುತ್ ಬಿಲ್ ಹಾಗೂ ಪರೀಕ್ಷಾ ಉಪಕರಣಗಳ ಬೆಲೆ ಏರಿಕೆಯನ್ನು ಕಾರಣವಾಗಿ ನೀಡಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘವು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆಯು, ರಾಜ್ಯದಲ್ಲಿ ಪಿಯುಸಿ (PUC) ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಕೊನೆಯದಾಗಿ 2022ರ ಏಪ್ರಿಲ್‌ನಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಪ್ರಸ್ತುತ ನಾಲ್ಕು ವರ್ಷಗಳ ದೀರ್ಘಾವಧಿಯ ಬಳಿಕ ಮತ್ತೆ ಶುಲ್ಕ ಏರಿಕೆಯಾಗಿದ್ದು, ಇದು ನೇರವಾಗಿ ಮಧ್ಯಮ ವರ್ಗ ಹಾಗೂ ಸಾಮಾನ್ಯ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ದ್ವಿಚಕ್ರ ವಾಹನಗಳಿಗೆ 15 ರೂಪಾಯಿಗಳವರೆಗೆ ಹೆಚ್ಚಳವಾಗಿದ್ದರೆ, ಎಲ್ಲಾ ಮಾದರಿಯ ಡೀಸೆಲ್ ವಾಹನಗಳ ಎಮಿಷನ್ ಟೆಸ್ಟ್‌ಗೆ ಬರೋಬ್ಬರಿ 40 ರೂಪಾಯಿಗಳಷ್ಟು ಅಧಿಕ ಶುಲ್ಕ ವಿಧಿಸಲಾಗಿದೆ.

ವಾಹನವಾರು ಹಳೆ ಮತ್ತು ಹೊಸ ಪರಿಷ್ಕೃತ ದರಗಳ ವಿವರ:

* ದ್ವಿಚಕ್ರ ವಾಹನ: ಹಳೆ ದರ 65 ರೂ., ಪರಿಷ್ಕೃತ ಹೊಸ ದರ 80 ರೂ.
* ತ್ರಿಚಕ್ರ ವಾಹನ: ಹಳೆ ದರ 75 ರೂ., ಪರಿಷ್ಕೃತ ಹೊಸ ದರ 80 ರೂ.
* ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಕಾರುಗಳು: ಹಳೆ ದರ 115 ರೂ., ಪರಿಷ್ಕೃತ ಹೊಸ ದರ 150 ರೂ.
* ಎಲ್ಲಾ ಮಾದರಿಯ ಇತರೆ ಡೀಸೆಲ್ ವಾಹನಗಳು: ಹಳೆ ದರ 160 ರೂ., ಪರಿಷ್ಕೃತ ಹೊಸ ದರ 200 ರೂ.

ಸಾರಿಗೆ ಇಲಾಖೆಯಿಂದ ಕಠಿಣ ಷರತ್ತುಗಳು ಹಾಗೂ ನಿಯಮಗಳು
ದರ ಹೆಚ್ಚಳಕ್ಕೆ ಅನುಮತಿ ನೀಡುವುದರ ಜೊತೆಗೆ, ಪರೀಕ್ಷಾ ಕೇಂದ್ರಗಳ ನಿರ್ವಹಣೆ ಮತ್ತು ಪಾರದರ್ಶಕತೆಗಾಗಿ ಸಾರಿಗೆ ಇಲಾಖೆಯು ಕೆಲವು ಕಠಿಣ ನಿಬಂಧನೆಗಳನ್ನು ವಿಧಿಸಿದೆ. ಕೇಂದ್ರಗಳಿಲ್ಲಿ ನುರಿತ ತಜ್ಞ ಸಿಬ್ಬಂದಿಯನ್ನು ನೇಮಿಸುವುದು ಕಡ್ಡಾಯವಾಗಿದ್ದು, ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸಾಧನಗಳನ್ನು ಕೊನೆಯದಾಗಿ ಪರೀಕ್ಷಿಸಿದ ದಿನಾಂಕವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ಕೈಬರಹದ ಪ್ರಮಾಣ ಪತ್ರಗಳನ್ನು ನೀಡುವಂತಿಲ್ಲ ಮತ್ತು ಕಡ್ಡಾಯವಾಗಿ ಗಣಕೀಕೃತ ಪ್ರಮಾಣಪತ್ರವನ್ನಷ್ಟೇ ವಿತರಿಸಬೇಕು ಎಂದು ಸೂಚಿಸಲಾಗಿದೆ.

ಜತೆಗೆ, ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ನಿಯಮ 115ರ ಪ್ರಕಾರ ನಿಗದಿತ ಮಿತಿಯೊಳಗೆ ವಾಹನದ ಹೊಗೆ ಹೊರಸೂಸುವಿಕೆ ಇದ್ದರೆ ಮಾತ್ರ ಪ್ರಮಾಣ ಪತ್ರವನ್ನು ನೀಡಬೇಕು. ಪ್ರತಿ ಕೇಂದ್ರದಲ್ಲೂ ಸರ್ಕಾರದ ಪರವಾನಗಿ ಪತ್ರವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಬಿಎಸ್-4 (BS-4) ಮತ್ತು ಬಿಎಸ್-6 (BS-6) ಮಾದರಿಯ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವು 12 ತಿಂಗಳವರೆಗೆ ಮಾನ್ಯತೆ ಪಡೆಯಲಿದೆ.

ರಾಜಕೀಯ ವಲಯದಲ್ಲಿ ತೀವ್ರ ವಿರೋಧ
ಕಾಂಗ್ರೆಸ್ ಸರ್ಕಾರದ ಈ ಕ್ರಮದ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಸರ್ಕಾರದ ಗ್ಯುರಂಟಿ ಯೋಜನೆಗಳ ಮತ್ತೊಂದು ಮುಖವಾಗಿದ್ದು, ಒಂದು ಕೈಯಿಂದ ಸೌಲಭ್ಯ ನೀಡಿ ಮತ್ತೊಂದು ಕೈಯಿಂದ ಜನಸಾಮಾನ್ಯರ ಜೇಬಿನಿಂದ ದುಪ್ಪಟ್ಟು ಹಣ ಕಿತ್ತುಕೊಳ್ಳಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಮಧ್ಯಮ ವರ್ಗದ ಜನರ ದುಡಿಮೆಯನ್ನು ಸರ್ಕಾರದ ಎಟಿಎಂ ರೀತಿಯಲ್ಲಿ ಬಳಸುವುದನ್ನು ನಿಲ್ಲಿಸಬೇಕೆಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *