Greater Bengaluru News9 : ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಂಡರ್ಪಾಸ್ ಕಾಮಗಾರಿ ದುರಂತಕ್ಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಅಸಡ್ಡೆ ಮತ್ತು ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಶಾಸಕ ಕೆ. ಗೋಪಾಲಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮತ್ತೊಬ್ಬರ ಮೃತದೇಹ ಮಣ್ಣಿನಡಿಯಲ್ಲಿರುವುದು ಕಂಡುಬಂದಿದೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
”ಮಳೆಗಾಲದ ಸಮಯದಲ್ಲಿ ಇಂತಹ ಬೃಹತ್ ಅಂಡರ್ಪಾಸ್ ಕಾಮಗಾರಿಗಳನ್ನು ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಅಧಿಕಾರಿಗಳು ಹಾಗೂ ತಜ್ಞರು ಯೋಚಿಸಬೇಕಿತ್ತು. ಇದು ಸಣ್ಣ ಚರಂಡಿ ಕಾಮಗಾರಿಯಲ್ಲ. ಮಳೆಯ ನೀರು ನಿಂತಾಗ ಅದನ್ನು ತೆರವುಗೊಳಿಸುವಾಗ ಈ ದುರಂತ ಸಂಭವಿಸಿದೆ. ಸುಮಾರು 18 ರಿಂದ 19 ಅಡಿ ಎತ್ತರದ ಮಣ್ಣಿನ ಕುಸಿತದಿಂದಾಗಿ ಐದು ಜನರ ಮೇಲೆ ಮಣ್ಣು ಬಿದ್ದಿದೆ. ಮಳೆಗಾಲಕ್ಕೆ ಮುನ್ನವೇ ಇಂತಹ ಕಾಮಗಾರಿಗಳನ್ನು ಮುಗಿಸಬೇಕಿತ್ತು” ಎಂದು ಕೆ. ಗೋಪಾಲಯ್ಯ ಕಿಡಿಕಾರಿದರು.
”ನಾನು ಶಾಸಕನಾಗುವ ಮುನ್ನವೇ ಪ್ರಾರಂಭವಾಗಿದ್ದ ಈ ಕಾಮಗಾರಿಯು ಅರ್ಧಂಬರ್ಧ ನಿಂತುಹೋಗಿತ್ತು. ಇದಕ್ಕಾಗಿ ಧರಣಿ ಕುಳಿತು 2023ರ ಆರಂಭದಲ್ಲಿ ಅನುಮೋದನೆ ಕೊಡಿಸಿ ಮತ್ತೆ ಕೆಲಸ ಪ್ರಾರಂಭವಾಗುವಂತೆ ಮಾಡಿದೆ. ಆದರೆ ಅಧಿಕಾರಿಗಳು ಸೂಕ್ತ ಯೋಜನೆ ಮತ್ತು ಜಾಗರೂಕತೆ ವಹಿಸದೆ ಕೆಲಸ ಮಾಡಿರುವುದೇ ಈ ಅನಾಹುತಕ್ಕೆ ಕಾರಣ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


