Greater Bengaluru News9: ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಬೆಸ್ಕಾಂ ಕೂಡ ಸಾಥ್ ನೀಡಿದ್ದು, ನಗರದ ಎಲ್ಲ ಉಪ ವಿಭಾಗಗಳ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿನ ನಿಷ್ಕ್ರಿಯ, ಅನುಪಯುಕ್ತ ಹಾಗೂ ಜನರ ಓಡಾಟಕ್ಕೆ ತೊಡಕಾಗಿರುವ ವಿದ್ಯುತ್ ಮೂಲಸೌಕರ್ಯಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಚುರುಕುಗೊಳಿಸಿದೆ.

ಈ ಸ್ವಚ್ಛತಾ ಅಭಿಯಾನದ ಭಾಗವಾಗಿ ಕಾಮಾಕ್ಷಿಪಾಳ್ಯದ ಒ ಮತ್ತು ಎಂ (O & M) ಎನ್-೬ (N6) ಉಪ ವಿಭಾಗದಲ್ಲಿ ಬಿಬಿಎಂಪಿ (BBMP) ಸಿಬ್ಬಂದಿ ಹಾಗೂ ಸ್ವಯಂಸೇವಕರೊಂದಿಗೆ ಕೈಜೋಡಿಸಿ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ‘ಕ್ಲೀನ್ ಅಪ್ ಬೆಂಗಳೂರು’ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ಹಾಗೂ ಪರಿಶೀಲನೆಗಾಗಿ ಎನ್-೬ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಮೇಡಂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು; ಅಲ್ಲದೆ, ಮುಖ್ಯ ಎಂಜಿನಿಯರ್ (CE), ಕಾರ್ಯಪಾಲಕ ಎಂಜಿನಿಯರ್ (EE) ಸರ್ ಹಾಗೂ ಎನ್-೬ ಎಇಇ ಮೇಡಂ ಅವರು ಒಟ್ಟಾಗಿ ಕಾಮಾಕ್ಷಿಪಾಳ್ಯದ ಎನ್-೬ ಉಪ ವಿಭಾಗದಲ್ಲಿ ಜರುಗಿದ ‘ಕ್ಲೀನ್ ಬೆಂಗಳೂರು ಅಭಿಯಾನ’ದ ಪ್ರಗತಿಯನ್ನು ನೇರವಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

ನಗರದ ಐದು ಬೆಸ್ಕಾಂ ವೃತ್ತಗಳ ಎಲ್ಲ ವಿಭಾಗಗಳಲ್ಲಿ ಆ.8 ಮತ್ತು 9ರಂದು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಬೆಸ್ಕಾಂ ನಿಗಮ ಕಚೇರಿಯ ಹಿರಿಯ ಅಧಿಕಾರಿಗಳನ್ನು ಎರಡು ದಿನಗಳ ವಿಶೇಷ ಅಭಿಯಾನದ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ. ಆ.7ರ ವರೆಗೆ 223 ವಿದ್ಯುತ್ ಕಂಬಗಳು, 8 ಟಿಸಿಗಳು, 7 ಆರ್ ಎಂಯುಗಳನ್ನು ಸ್ಥಳಾಂತರಿಸಲಾಗಿದೆ. 694 ಡಿಟಿಸಿ ಯಾರ್ಡ್, 107 ಆರ್ಎಂಯು, 110 ಸ್ಟನ್ ಪೋಲ್ಗಳ ಬಳಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.


