Greater Bengaluru News9 : ಬಿ ಖಾತೆಯನ್ನು ಎ ಖಾತೆಯಾಗಿ ಪರಿವರ್ತಿಸಲು ಲಂಚ ಕೇಳಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಆರ್ಆರ್ ನಗರ ವಲಯ ಕಚೇರಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಶ್ಚಿಮ ನಗರ ಪಾಲಿಕೆಯ ಆರ್ಆರ್ ನಗರ ವಲಯ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆಗಾಗಿ ಮೇ ತಿಂಗಳಲ್ಲೇ ಅರ್ಜಿ ಸಲ್ಲಿಸಿದ್ದರೂ ಹಲವು ತಿಂಗಳು ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಇದರಿಂದ ಬೇಸತ್ತ ಅರ್ಜಿದಾರರು ಕಚೇರಿಗೆ ತೆರಳಿ ಶೀಘ್ರವೇ ಖಾತೆ ಪರಿವರ್ತನೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳು ಅರ್ಜಿದಾರರನ್ನು ಒಬ್ಬೊಬ್ಬರಾಗಿ ಕರೆದು, ಎ ಖಾತೆ ಮಾಡಿಕೊಡಲು 40 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜಂಟಿ ಆಯುಕ್ತೆ ಮೇಡಂಗೆ ಕೊಡಬೇಕು, ಇಲ್ಲಿ ಎಲ್ಲವೂ ಹೀಗೆಯೇ ನಡೆಯುತ್ತದೆ ಎಂದು ಹೇಳಿ ಅಧಿಕಾರಿಗಳು ಹಣ ಕೇಳಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲಂಚದ ಬೇಡಿಕೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಕಚೇರಿಯಲ್ಲೇ ಅಧಿಕಾರಿಗಳನ್ನು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಲಂಚದ ಆರೋಪದ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಖಾತೆ ಪರಿವರ್ತನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


