Greater Bengaluru News9: ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರ ಆದೇಶ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ರವರ ನಿರ್ದೇಶನದ ಮೇರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4.60 ಕಿ.ಮೀ. ನಷ್ಟು ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮುಕ್ತಗೊಳಿಸಲಾಗಿದೆ.
ವಿಭಾಗವಾರು ಕಾರ್ಯಾಚರಣೆಯ ವಿವರ:
ಜಯನಗರ ವಿಭಾಗ: 9ನೇ ಕ್ರಾಸ್ ರಸ್ತೆಯಲ್ಲಿ 0.5 ಕಿ.ಮೀ. ಪಾದಚಾರಿ ಮಾರ್ಗ ತೆರವುಗೊಳಿಸಲಾಗಿದ್ದು, 1 ಅಂಗಡಿಯನ್ನು ತೆರವುಗೊಳಿಸಲಾಗಿದೆ.
ಪದ್ಮನಾಭನಗರ ಭಾಗ: 14ನೇ ಮೇನ್ ರಸ್ತೆಯಲ್ಲಿ 1.00 ಕಿ.ಮೀ. ಪಾದಚಾರಿ ಮಾರ್ಗ ತೆರವುಗೊಳಿಸಲಾಗಿದ್ದು, 8 ಎಸಿ ಶೀಟ್ ಪ್ರೊಜೆಕ್ಷನ್/ಕ್ಯಾನೋಪಿ, 4 ಮೆಟ್ಟಿಲು/ರ್ಯಾಂಪ್, 8 ಜಾಹೀರಾತು ಬೋರ್ಡ್ ಹಾಗೂ 1 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗ: ಸುಭಾಷ್‌ನಗರ ಮೇನ್ ರಸ್ತೆಯಲ್ಲಿ 1.00 ಕಿ.ಮೀ. ಹಾಗೂ ದೊಡ್ಡನಾಗಮಂಗಲ ಮೇನ್ ರಸ್ತೆಯಲ್ಲಿ 0.90 ಕಿ.ಮೀ. ಸೇರಿದಂತೆ ಒಟ್ಟು 1.90 ಕಿ.ಮೀ. ತೆರವುಗೊಳಿಸಲಾಗಿದ್ದು, 3 ಕೈಗಾಡಿಗಳು, 12 ಎಸಿ ಶೀಟ್ ಪ್ರೊಜೆಕ್ಷನ್/ಕ್ಯಾನೋಪಿ, 22 ಮೆಟ್ಟಿಲು/ರ್ಯಾಂಪ್ ಹಾಗೂ 8 ಜಾಹೀರಾತು ಬೋರ್ಡ್‌ಗಳನ್ನು ತೆರವುಗೊಳಿಸಲಾಗಿದೆ.
ಬೊಮ್ಮನಹಳ್ಳಿ (HSR ವಿಭಾಗ): 19ನೇ ಮೇನ್ ರಸ್ತೆಯಲ್ಲಿ (ಮುತ್ಹಳ್ಳಿ ಹೋಟೆಲ್‌ನಿಂದ ORR ವರೆಗೆ) 1.20 ಕಿ.ಮೀ. ಪಾದಚಾರಿ ಮಾರ್ಗ ತೆರವುಗೊಳಿಸಲಾಗಿದ್ದು, 4 ಅಂಗಡಿಗಳು/ಪೆಟ್ಟಿ ಶಾಪ್, 1 ಕೈಗಾಡಿ, 15 ಮೆಟ್ಟಿಲು/ರ್ಯಾಂಪ್ ಹಾಗೂ 2 ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.
ಒಟ್ಟಾರೆಯಾಗಿ ಇಂದು ನಡೆಸಲಾದ ಕಾರ್ಯಾಚರಣೆಯಲ್ಲಿ ಒಟ್ಟು 4.60 ಕಿ.ಮೀ. ಪಾದಚಾರಿ ಮಾರ್ಗವನ್ನು ಮುಕ್ತಗೊಳಿಸಲಾಗಿದ್ದು, 5 ಅಂಗಡಿಗಳು/ಪೆಟ್ಟಿ ಶಾಪ್‌ಗಳು, 4 ಕೈಗಾಡಿಗಳು, 20 ಎಸಿ ಶೀಟ್ ಪ್ರೊಜೆಕ್ಷನ್/ಕ್ಯಾನೋಪಿಗಳು, 41 ಮೆಟ್ಟಿಲು ಮತ್ತು ರ್ಯಾಂಪ್‌ಗಳು, 16 ಜಾಹೀರಾತು ಬೋರ್ಡ್‌ಗಳು ಹಾಗೂ 3 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.
ಈ ತೆರವು ಕಾರ್ಯಾಚರಣೆಗಾಗಿ ಪಾಲಿಕೆಯ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಅಂಗಡಿಗಳು, ಕೈಗಾಡಿಗಳು ಹಾಗೂ ಜಾಹೀರಾತು ಬೋರ್ಡ್‌ಗಳನ್ನು ತೆರವುಗೊಳಿಸಲು ಅಗತ್ಯ ಯಂತ್ರೋಪಕರಣಗಳು ಹಾಗೂ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಒತ್ತುವರಿಗಳ ವಿರುದ್ಧ ಕಾರ್ಯಾಚರಣೆಯು ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿದೆ.
ಒಟ್ಟು 121.36 ಕಿ. ಮೀ. ಒತ್ತುವರಿ ತೆರವು
ಪಾದಚಾರಿಗಳ ಹಿತದೃಷ್ಟಿಯಿಂದ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆಯವರೆಗಿನ 116.76 ಕಿ.ಮೀ. ಹಾಗೂ ಇಂದಿನ 4.60 ಕಿ.ಮೀ. ಸೇರಿದಂತೆ ಇದುವರೆಗೆ ಒಟ್ಟು 121.36 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.


