BBMP
Loading ...

Puncture Scam

Greater Bengaluru News9 : ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ಬೈಕ್ ಹಾಗೂ ಕಾರುಗಳನ್ನು ಪಂಚರ್ ಮಾಡಿಸಿ ಹಣ ಸಂಪಾದಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಕೃತ್ಯ ಬಯಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಗಳು ಜಾಲಹಳ್ಳಿಯ ಎಂಇಎಸ್ ರಿಂಗ್ ರಸ್ತೆ ಸಮೀಪ ಪಂಚರ್ ಅಂಗಡಿ ನಡೆಸುತ್ತಿದ್ದರು. ತಮ್ಮ ಅಂಗಡಿಗೆ ಹೆಚ್ಚಿನ ಗ್ರಾಹಕರು ಬರಲೆಂಬ ಉದ್ದೇಶದಿಂದ ಬೈಕ್‌ನಲ್ಲಿ ಸಂಚರಿಸಿ ರಸ್ತೆಯುದ್ದಕ್ಕೂ ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.

ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಪಂಚರ್ ಆದ ಬಳಿಕ ಸವಾರರು ವಾಹನಗಳನ್ನು ತಳ್ಳಿಕೊಂಡು ಬಂದಾಗ, ಆರೋಪಿಗಳು ಅಲ್ಲೇ ಇದ್ದಂತೆ ನಟಿಸಿ ಪಂಚರ್ ಹಾಕಿಕೊಡುವ ಮೂಲಕ ಹಣ ಸಂಪಾದಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಒಂದೇ ಪ್ರದೇಶದಲ್ಲಿ ನಿರಂತರವಾಗಿ ವಾಹನಗಳು ಪಂಚರ್ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ರಸ್ತೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಪತ್ತೆಯಾಗಿದ್ದವು.

ಬಳಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಬೈಕ್‌ನಲ್ಲಿ ಬಂದು ರಸ್ತೆಗೆ ಮೊಳೆಗಳನ್ನು ಚೆಲ್ಲುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿದ್ದವು. ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *