Greater Bengaluru News9 : ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಹೊಂದುವುದು ಹಾಗೂ ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವುದು ಇನ್ಮುಂದೆ ಅಷ್ಟು ಸುಲಭವಾಗಿ ಉಳಿದಿಲ್ಲ. ಈಗಾಗಲೇ ನೋಂದಣಿ ಶುಲ್ಕ, ಸ್ಟ್ಯಾಂಪ್ ಡ್ಯೂಟಿ ಹಾಗೂ ವಿವಿಧ ತೆರಿಗೆಗಳ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಜೇಬಿಗೆ ರಾಜ್ಯ ಸರ್ಕಾರ ಮತ್ತೊಂದು ದೊಡ್ಡ ಆಘಾತ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯ ಸರ್ಕಾರ ಜೂನ್ 4 ರಂದು ಹೊರಡಿಸಿರುವ ನೂತನ ಕರಡು ಅಧಿಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿರುವ ಯಾವುದೇ ವ್ಯಕ್ತಿ ತನ್ನ ತಂದೆಯ ಅಥವಾ ಪಿತ್ರಾರ್ಜಿತವಾದ 2,000 ಚದರ ಮೀಟರ್‌ಗಿಂತಲೂ ಹೆಚ್ಚಿನ ವಿಸ್ತೀರ್ಣದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾದರೆ, ಆ ಆಸ್ತಿಯಲ್ಲಿ ಬರೋಬ್ಬರಿ ಶೇ. 45 ರಷ್ಟು ಪಾಲನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ. ಆದರೆ, ಒಡಹುಟ್ಟಿದವರ ನಡುವೆ ಕೋರ್ಟ್ ವ್ಯಾಜ್ಯಗಳ ಮೂಲಕ ಆಸ್ತಿ ಹಂಚಿಕೆಯಾದರೆ ಈ ನಿಯಮ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಸರ್ಕಾರದ ಈ ವಿನೂತನ ಹಾಗೂ ಕಠಿಣ ನೀತಿಯ ವಿರುದ್ಧ ಬೆಂಗಳೂರಿನ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರಿಂದ ವ್ಯಾಪಕ ಆಕ್ಷೇಪಣೆ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ನೀಡಿದ್ದ ಸಮಯ ಮುಗಿಯುತ್ತಾ ಬಂದಿದ್ದು, ಸಾರ್ವಜನಿಕರು ಈ ಕರಡು ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ, ಈ ನಿಯಮವು ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಡೆವಲಪರ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತರಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದ್ದೇ ಆದಲ್ಲಿ, ಸರ್ಕಾರದ ವಿರುದ್ಧ ಬೆಂಗಳೂರಿಗರು ಬೀದಿಗಿಳಿದು ಬೃಹತ್ ಹೋರಾಟ ನಡೆಸಲು ಸಿದ್ಧರಾಗುತ್ತಿದ್ದಾರೆ.


