BBMP
Loading ...

Ration Shop

Greater Bengaluru News9 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಈವರೆಗೆ ಅನ್ನಭಾಗ್ಯ ಅಕ್ಕಿ ಕಾಳಸಂತೆ ಸಂಬಂಧಿಸಿದಂತೆ 1,493 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸುಮಾರು ₹50 ಕೋಟಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ ಕಾಳಸಂತೆ ಜಾಲ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಕಠಿಣ ನಿಗಾ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಇದಕ್ಕಾಗಿ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ, ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗಳನ್ನು ಕಮಾಂಡ್ ಸೆಂಟರ್ ಮೂಲಕ ರಿಯಲ್‌ಟೈಮ್‌ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಲಾರಿಗಳು ನಿಗದಿತ ಮಾರ್ಗದಲ್ಲೇ ಸಂಚರಿಸುತ್ತಿವೆಯೇ ಅಥವಾ ಮಧ್ಯದಲ್ಲಿ ಮಾರ್ಗ ಬದಲಿಸುತ್ತಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ.

ಫಲಾನುಭವಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿಯಲ್ಲೂ ಬದಲಾವಣೆ ತರಲಾಗಿದೆ. ಇನ್ನು ಮುಂದೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅಂಗಡಿಗಳು ತೆರೆದಿರಲಿದ್ದು, ಸಾರ್ವಜನಿಕರು ತಮ್ಮ ಅನುಕೂಲದ ವೇಳೆಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವದ ಯೋಜನೆಯಾದ ಇಂದಿರಾ ಕಿಟ್ ವಿತರಣೆಗೆ ಸಿದ್ಧತೆ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಎರಡು ರಿಂದ ಮೂರು ತಿಂಗಳೊಳಗೆ ಕಿಟ್ ವಿತರಣೆ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿದ ಸಚಿವರು, ಆರಂಭದಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅಗತ್ಯ ಪ್ರಮಾಣದ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಹಾಗೂ ಉಳಿದ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು. ಬಳಿಕ ಪರಿಸ್ಥಿತಿಗೆ ಅನುಗುಣವಾಗಿ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ವಿತರಣೆ ಮಾಡಲಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ವಿತರಿಸುವ ಯೋಜನೆಯೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *