ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಇಂದು (ಜುಲೈ 18) ನಿಧನರಾಗಿದ್ದಾರೆ.
ಚೆನ್ನಮ್ಮ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರಿಗೆ ಉಸಿರಾಟದ ತೊಂದರೆ ಕಂಡುಬಂದ ಹಿನ್ನಲೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ದೇವೇಗೌಡರ ರಾಜಕೀಯ ಜೀವನದ ಏಳುಬೀಳುಗಳಲ್ಲಿ ನೆರಳಾಗಿ ನಿಂತಿದ್ದ ಅವರ ಅಗಲಿಕೆಗೆ ಇಡೀ ರಾಜಕೀಯ ವಲಯ ತೀವ್ರ ಕಂಬನಿ ಮಿಡಿದಿದೆ.
ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಚೆನ್ನಮ್ಮ ಅವರು ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಕುಟುಂಬದ ಆಧಾರಸ್ತಂಭವಾಗಿದ್ದರು. ಇಬ್ಬರು ಹೆಣ್ಣುಮಕ್ಕಳು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡುಮಕ್ಕಳನ್ನು ಒಳಗೊಂಡ ದೊಡ್ಡ ರಾಜಕೀಯ ಕುಟುಂಬವನ್ನು ಅತ್ಯಂತ ಪ್ರೀತಿಯಿಂದ ಮುನ್ನಡೆಸಿದ್ದ ಚೆನ್ನಮ್ಮ ಅವರ ನಿಧನಕ್ಕೆ ವಿವಿಧ ಪಕ್ಷಗಳ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಇದು ಎರಡನೇ ಬಾರಿ ಆಸ್ಪತ್ರೆ ಸೇರಿದ್ದು!
2001 ನೇ ಇಸವಿಯಲ್ಲಿ ಚೆನ್ನಮ್ಮ ಅವರ ಮೇಲೆ ಆಸಿಡ್ ದಾಳಿಯಾದಾಗ ಆಸ್ಪತ್ರೆಯಲ್ಲಿ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಅದರ ಬಳಿಕ ಇವಾಗ ಉಸಿರಾಟದ ತೊಂದರೆ ಎಂದು ಆಸ್ಪತ್ರೆ ಸೇರಿದ್ದ ಚೆನ್ನಮ್ಮ ವಿಧಿವಶರಾಗಿದ್ದಾರೆ.
ಮೃತರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳನ್ನು ಕುಟುಂಬದ ಮೂಲಗಳು ಶೀಘ್ರದಲ್ಲೇ ಪ್ರಕಟಿಸಲಿವೆ.


