BBMP
Loading ...

Vidhanasoudha

Greater Bengaluru News9 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಘೋಷಿಸಿದ್ದ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ರಾಜ್ಯಾದ್ಯಂತ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ.

ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ ಸಮುದಾಯದ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಈ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯೋಜನೆಗಾಗಿ ಪ್ರತಿ ಸಂಘಕ್ಕೆ ಪ್ರತಿ ವರ್ಷ ರೂ. 10 ಲಕ್ಷದಂತೆ ಒಟ್ಟು 1,000 ಕೋಟಿ ರು. ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಸಾವಿರ ಸಂಘಗಳು ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 4 ಸಾವಿರ ಸಂಘಗಳನ್ನು ಸ್ಥಾಪಿಸಲಾಗುತ್ತದೆ.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಂಘ ಸ್ಥಾಪಿಸಲಾಗುತ್ತದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಗಳಲ್ಲೂ ಜನಸಂಖ್ಯೆ ಆಧಾರಿತವಾಗಿ ಸಂಘಗಳನ್ನು ರಚಿಸಲಾಗುತ್ತದೆ.

ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಯೋಜನೆ ಜಾರಿಗೊಳ್ಳಲಿದೆ.

ಪ್ರತಿ ಸಂಘಕ್ಕೆ ಒಬ್ಬ ತರಬೇತುದಾರರನ್ನು ನೇಮಿಸಲಾಗುತ್ತಿದ್ದು, ಅವರ ಗೌರವಧನಕ್ಕಾಗಿ ವಾರ್ಷಿಕ ರೂ. 24 ಸಾವಿರದಂತೆ ಒಟ್ಟು 24 ಕೋಟಿ ರೂ. ವೆಚ್ಚವನ್ನು ಸಂಘಗಳಿಗೆ ನೀಡಲಾಗುವ ಅನುದಾನದಿಂದ ಭರಿಸಲಾಗುತ್ತದೆ.

ಯೋಜನೆಯ ಆಡಳಿತಾತ್ಮಕ ನಿರ್ವಹಣೆ ಹಾಗೂ ಯೋಜನಾ ನಿರ್ವಹಣಾ ಘಟಕದ (PMU) ವೆಚ್ಚಕ್ಕಾಗಿ ಪ್ರತಿ ವರ್ಷ ಸುಮಾರು 10 ಕೋಟಿ ರೂ. ಅನುದಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒದಗಿಸಲಾಗುತ್ತದೆ.

ಮಹಾನಗರ ಪಾಲಿಕೆ ಹಾಗೂ ಜಿಬಿಎ ವ್ಯಾಪ್ತಿಯ ಸಂಘಗಳಿಗೆ ಸಂಬಂಧಿಸಿದ ವೆಚ್ಚವನ್ನು ಆಯಾ ಸಂಸ್ಥೆಗಳು ತಮ್ಮ ಸ್ವಂತ ಆಯವ್ಯಯದಿಂದ ಭರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಯುವಕರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಸಕಾರಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಈ ಯೋಜನೆ ರಾಜ್ಯದಾದ್ಯಂತ ಜಾರಿಯಾಗಲಿದೆ.

Leave a Reply

Your email address will not be published. Required fields are marked *