Greater Bengaluru News9 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕೇವಲ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವುದಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ ಅಡಿ ಅದ್ಭುತ ಕೆಲಸಗಳನ್ನು ಮಾಡುತ್ತಿದೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದ ರಕ್ಷಣೆ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ನಿಗಮವು ಕೋಟಿ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ.
ಭದ್ರಾ ಅರಣ್ಯವನ್ನು ಕಳ್ಳಬೇಟೆಗಾರರಿಂದ ರಕ್ಷಿಸಲು ನಿಗಮವು 21 ಕಳ್ಳಬೇಟೆ ತಡೆ ಶಿಬಿರಗಳನ್ನು ತಲಾ 3 ಲಕ್ಷ ರೂ. ವೆಚ್ಚದಲ್ಲಿ ಬಲಪಡಿಸಿದೆ. ಅರಣ್ಯದ ಮೇಲೆ ನಿಗಾ ಇಡಲು ಮೂರು ಥರ್ಮಲ್ ಡ್ರೋನ್ಗಳು, ಹುಲಿ ಗಣತಿಗಾಗಿ 100 ಕ್ಯಾಮರಾ ಟ್ರ್ಯಾಪ್ಗಳು ಮತ್ತು ಗಸ್ತು ತಿರುಗಲು ಒಂದು ಯಾಂತ್ರಿಕೃತ ದೋಣಿಯನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲದೆ, ಪ್ರವಾಸೋದ್ಯಮಕ್ಕೆ ಮಿನಿ ಬಸ್, ರಸ್ತೆ ದುರಸ್ತಿ ಸೇರಿ ಒಟ್ಟಾರೆಯಾಗಿ ಅರಣ್ಯ ಸಂರಕ್ಷಣೆಗೆ 2.58 ಕೋಟಿ ರೂ.ಗಳ ಬೃಹತ್ ಕೊಡುಗೆ ನೀಡಿದೆ.
ನಿಗಮದ ಸಿಎಸ್ಆರ್ ಅನುದಾನವು ಕೇವಲ ಅರಣ್ಯಕ್ಕೆ ಸೀಮಿತವಾಗಿಲ್ಲ. ಜಿಲ್ಲೆಯ ಶಾಲೆಗಳಿಗೆ ಇಂಟರ್ಯಾಕ್ಟಿವ್ ಪ್ಯಾನಲ್ ಟಿವಿ, ಕಂಪ್ಯೂಟರ್ಗಳನ್ನು ಒದಗಿಸಿದ್ದರೆ, ಕೆಂಪನಹಳ್ಳಿ ಮತ್ತು ಕಡೂರಿನ ವಿಶೇಷ ಚೇತನ ಮಕ್ಕಳ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಸೇವೆ ಮತ್ತು ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗಾಗಿ ಬರೋಬ್ಬರಿ ಎರಡು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ, ಅರಣ್ಯ ಸಂರಕ್ಷಣೆಗಾಗಿ 2.58 ಕೋಟಿ ರೂ., ಕ್ರೀಡಾ ಚಟುವಟಿಕೆಗಳಿಗಾಗಿ 2 ಕೋಟಿ ರೂ., ಶಿಕ್ಷಣಕ್ಕಾಗಿ 1 ಕೋಟಿ ರೂ.ಗಿಂತ ಹೆಚ್ಚು ಮತ್ತು ಆರೋಗ್ಯ ಕ್ಷೇತ್ರಕ್ಕಾಗಿ 54.22 ಲಕ್ಷ ರೂ.ಗಳನ್ನು ಕೆಪಿಟಿಸಿಎಲ್ ವಿನಿಯೋಗಿಸಿದೆ. ವಿದ್ಯುತ್ ಮೂಲಸೌಕರ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಕೆಪಿಟಿಸಿಎಲ್, ರಾಜ್ಯದ ‘ಹಸಿರು ಪೋಷಕ’ನಾಗಿ ಹೊರಹೊಮ್ಮಿದೆ.


