Greater Bengaluru News9: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಂಚ ಪಾಲಿಕೆಗಳ ಚುನಾವಣೆ (GBA Election) ಮತ್ತೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಆ.31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲೇಬೇಕು, ಯಾವುದೇ ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರಿಂ ಕೋರ್ಟ್ ಪೀಠ ಆದೇಶ ನೀಡಿದ್ರೂ, ಮತ್ತೆ ಚುನಾವಣೆ ಮುಂದೂಡುವಂತೆ GBA ಚೀಫ್ ಕಮಿಷನರ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮತ್ತೆ ಮುಂದೂಡಿಕೆ ಅರ್ಜಿ ಸಲ್ಲಿಕೆ
ಜಿಬಿಎ ನಗರ ಪಾಲಿಕೆಗೆಳ ಚುನಾವಣೆ ಮುಂದೂಡಲು ಮತ್ತೆ ಸುಪ್ರೀಂ ಕೋರ್ಟ್ಗೆ ಜಿಬಿಎ ಚೀಫ್ ಕಮಿಷನರ್ ಮಹೇಶ್ವರ್ ರಾವ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಕಾರ್ಯದಿಂದಾಗಿ ಆ.31ರೊಳಗೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೊಂದು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಜು.13ಕ್ಕೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ ಸಾಧ್ಯತೆ
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ ನಡೆಸಲು ಮತ್ತೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಜುಲೈ 13ಕ್ಕೆ ಜಿಬಿಎ ಕಮಿಷನರ್ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮತ್ತೆ ಮುಂದೂಡಿಕೆ ಆಗುತ್ತಾ ಜಿಬಿಎ ಎಲೆಕ್ಷನ್?
ಡಿಸೆಂಬರ್ವರೆಗೂ ಕಾಲಾವಕಾಶಕ್ಕೆ ಮನವಿ
ಈ ಹಿಂದೆ ಸುಪ್ರೀಂ ಕೋರ್ಟ್ 31 ಆಗಸ್ಟ್ 2026 ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಖಡಕ್ ನಿರ್ದೇಶನ ನೀಡಿತ್ತು. ಬಳಿಕ 20 ಮೇ 2026ರಲ್ಲಿ ಆದೇಶವನ್ನು ಮಾರ್ಪಡಿಸುವಂತೆ ಸರ್ಕಾರ ಕೋರಿದೆ. ಅಲ್ಲದೇ 31 ಆಗಸ್ಟ್ ಒಳಗೆ ಚುನಾವಣೆ ನಡೆಸುವುದು ಕಷ್ಟಕರವಾಗಿದ್ದು, 31 ಡಿಸೆಂಬರ್ 2026ರವರೆಗೆ ಕಾಲಾವಕಾಶ ವಿಸ್ತರಣೆಯನ್ನು ಮಾಡುವಂತೆ ಅರ್ಜಿಯಲ್ಲಿ ಸಲ್ಲಿಕೆ ಮೂಲಕ ಸರ್ಕಾರ ಮನವಿ ಮಾಡಿದೆ.
ಮತ್ತೆ ಕಾಲಾವಕಾಶಕ್ಕೆ ಅರ್ಜಿ ಸಲ್ಲಿಕೆಗೆ ಕಾರಣ ಏನು?
- ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR)
- ಚುನಾವಣಾ ಸಿದ್ಧತೆಗಳ ಮೇಲೆ ಪರಿಣಾಮ ಬೀರುವ ಇತರ ಆಡಳಿತಾತ್ಮಕ ಹಾಗೂ ವ್ಯವಸ್ಥಾಪನಾ ಸವಾಲುಗಳಿವೆ
- ಆಡಳಿತಾತ್ಮಕ ನಿರ್ಬಂಧಗಳ ಕಾರಣದಿಂದಾಗಿ, ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಗಳನ್ನು ನಡೆಸುವ ಗಡುವನ್ನು ವಿಸ್ತರಿಸಿ
- 31 ಆಗಸ್ಟ್ 2026ರಿಂದ 31 ಡಿಸೆಂಬರ್ 2026ಕ್ಕೆ ಸಮಯ ವಿಸ್ತರಣೆಗೆ ಮನವಿ
ಸರ್ಕಾರ ಸಲ್ಲಿಸುವ ಅಫಿಡವಿಟ್ ಅನ್ನು ಸುಪ್ರಿಂ ಕೋರ್ಟ್ ಪರಿಗಣಿಸಿದರೆ ಪಂಚ ಪಾಲಿಕೆಗಳ ಚುನಾವಣೆಗೆ ಮತ್ತೆ ಅನಿಶ್ಚಿತತೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ.


