Greater Bengaluru News9 : ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಬೆಸ್ಕಾಂ ವ್ಯಾಪ್ತಿಯಲ್ಲಿ ಬುಧವಾರ ಚಾಲನೆ ನೀಡಲಾಗಿದೆ. ಈ ಬೆನ್ನಲ್ಲೆ ಫಲಾನುಭವಿಗಳ ಗೊಂದಲಗಳ ನಿವಾರಣೆಗೆ ಬೆಸ್ಕಾಂ ಮಾಹಿತಿ ನೀಡಿದ್ದು, ಹಲವು ಗೊಂದಲಗಳು ನಿವಾರಣೆಯಾಗಲಿವೆ.
ಬೆಸ್ಕಾಂ ಸಿಬ್ಬಂದಿ ಮನೆ ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳು ನೀಡಿರುವ ಮಾಹಿತಿಯು ಅಪೂರ್ಣವಾಗಿದ್ದರೆ, ಸದ್ಯ ನೀಡಿರುವ ಮಾಹಿತಿಗಳನ್ನು ಮೊಬೈಲ್ ಆಪ್ ನ ಡ್ರಾಫ್ಟ್ ನಲ್ಲಿ ಉಳಿಸಿ, ಇನ್ನೊಮ್ಮೆ ಫಲಾನುಭವಿ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಲಾಗಿದೆ.
ಸಂಬಂಧಿ ಸಹಿ ನಡೆಯುತ್ತೆ
ಮುದ್ರಿತ ಘೋಷಣಾ ಪತ್ರದಲ್ಲಿ ಫಲಾನುಭವಿಗಳ ಸಹಿಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಮಾಹಿತಿ ಪರಿಶೀಲನೆ ಸಮಯದಲ್ಲಿ ಫಲಾನುಭವಿ ಸ್ಥಳದಲ್ಲಿ ಲಭ್ಯ ವಿಲ್ಲದಿದ್ದರೆ ಫಲಾನುಭವಿಯ ಹತ್ತಿರದ ಸಂಬಂಧಿಯ ಸಹಿಯನ್ನು ಪಡೆಯಲು ಸಿಬ್ಬಂದಿಗೆ ಸೂಚಿಸಲಾಗಿದೆ.
ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ ಎಂದ ಬೆಸ್ಕಾಂ
- ಫಲಾನುಭವಿಯ ವಿದ್ಯುತ್ ಖಾತೆ ಸಂಖ್ಯೆ
- ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿದ್ದ ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಆಳತೆಯ ಭಾವಚಿತ್ರ
- ವೋಟರ್ ಐಡಿ
- ರೇಷನ್ ಕಾರ್ಡ್
- ಪ್ಯಾನ್ ಕಾರ್ಡ್
- ಬಾಡಿಗೆ ,ಭೋಗ್ಯ (ಲೀಸ್) ಕರಾರು ಪತ್ರ (ಅನ್ವಯಿಸುಲ್ಲಿ ಮಾತ್ರ)
ಸಿಬ್ಭಂದಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲು ಫಲಾನುಭವಿಗಳಿಗೆ ಬೆಸ್ಕಾಂ ಮನವಿ ಮಾಡಿದೆ.
ಪರಿಶೀಲನೆ ಪ್ರಕ್ರಿಯೆ ಹೇಗಿರುತ್ತದೆ
ಮೊಬೈಲ್ ಆಪ್ ಜೊತೆಗೆ ಮುದ್ರಿತ ಘೋಷಣಾ ಪತ್ರವನ್ನು ಫಲಾನುಭವಿಗಳ ಸಮ್ಮುಖದಲ್ಲಿ ಎಸ್ಕಾಂ ಸಿಬ್ಬಂದಿ ಭರ್ತಿ ಮಾಡಿಕೊಳ್ಳುತ್ತಾರೆ. ಫಲಾನುಭವಿಯ ವಿದ್ಯುತ್ ಖಾತೆ ಸಂಖ್ಯೆ, ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿದ್ದ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ, ಫಲಾನುಭವಿಯ ಪಾಸ್ ಪೋರ್ಟ್ ಆಳತೆಯ ಭಾವಚಿತ್ರ, ವೋಟರ್ ಐಡಿ, ರೇಷನ್ ಕಾರ್ಡ್ , ಪ್ಯಾನ್ ಕಾರ್ಡ್ ಬಾಡಿಗೆ / ಭೋಗ್ಯ (ಲೀಸ್) ಕರಾರು ಪತ್ರ (ಅನ್ವಯಿಸುಲ್ಲಿ ಮಾತ್ರ) ಹಾಗೂ ವರ್ಗದ ಮಾಹಿತಿಯನ್ನು ಮೊಬೈಲ್ ಆಪ್ ಹಾಗೂ ಮುದ್ರಿತ ಘೋಷಣಾ ಪತ್ರದಲ್ಲಿ ದಾಖಲಿಸಿಕೊಳ್ಳುತ್ತಾರೆ. ಪತ್ರವಾಗಿದ್ದರೆ ಕೊನೆಗೆ ಒಂದು ಸಹಿ ಪಡೆಯುತ್ತಾರೆ.
ಪರಿಶೀಲನೆ ಕಾರ್ಯ 2 ತಿಂಗಳು ನಡೆಯಲಿದೆ
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆಗೆ ಬೆಸ್ಕಾಂ ಮೀಟರ್ ರೀಡರ್ ಗಳು ಹಾಗೂ ಸಿಬ್ಬಂದಿ ತೆರಳಿ ಮಾಹಿತಿ ಸಂಗ್ರಹಿಸಿ, ಸೇವಾ ಸಿಂಧು ಮೊಬೈಲ್ ಆಪ್ ನಲ್ಲಿ ದಾಖಲಿಸಿದರು. ಮಾಹಿತಿ ಸಂಗ್ರಹ ಕಾರ್ಯ ಜುಲೈ 1 ರಿಂದ ಆಗಸ್ಟ್ 31 ರವರೆಗೆ ಕಾಲ ನಡೆಯಲಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಮೇ 31, 2026ರವರೆಗೆ ಒಟ್ಟು 68.86 ಲಕ್ಷ ಗೃಹ ಜ್ಯೋತಿ ಫಲಾನುಭವಿಗಳಿದ್ದು, ಫಲಾನುಭವಿಗಳು ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಮಾಹಿತಿ ಸಂಗ್ರಹ ಹಾಗೂ ಸಿಬ್ಬಂದಿ ಭೇಟಿ ಕುರಿತು ಈಗಾಗಲೇ ಎಸ್‌ಎಮ್‌ಎಸ್ ಸಂದೇಶ ಕಳುಹಿಸಲಾಗಿದೆ. ಫಲಾನುಭವಿಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ತೆರಳುವ ಬೆಸ್ಕಾಂನ ಮೀಟರ್ ರೀಡರ್ ಹಾಗೂ ಸಿಬ್ಬಂದಿ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ. ಮೊದಲ ದಿನ ಒಟ್ಟು 2536 ಫಲಾನುಭವಿಗಳ ಮಾಹಿತಿ ಸಂಗ್ರಹ ಮಾಡಲಾಯಿತು.


