Greater Bengaluru News9 : ರಾಜ್ಯ ಸರಕಾರ ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿ ಅರ್ಜಿ ಸಲ್ಲಿಕೆಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಸಿಬ್ಬಂದಿ ಸರಕಾರಿ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಬೇಕು ಎಂದು ಬೆಸ್ಕಾಂ ಆದೇಶ ಹೊರಡಿಸಿದೆ.
ರಾಜ್ಯದಲ್ಲಿವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಎದುರಾಗುತ್ತಿದ್ದ ತೊಂದರೆ ನಿವಾರಣೆಗಾಗಿ ಸರಕಾರ, ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ(ಒಸಿ) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿದೆ. ಹೊಸದಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಜೂ.22ರಿಂದ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಕಡಿಮೆಯಿದೆ. ಮತ್ತೊಂದೆಡೆ ಈ ಅವಧಿಯಲ್ಲಿ4 ದಿನ ಸರಕಾರಿ ರಜೆಗಳಿವೆ. ಹೀಗಾಗಿ, ಸಾರ್ವಜನಿಕರಿಗೆ ಸಮಸ್ಯೆ ತಪ್ಪಿಸಲು ಸರಕಾರಿ ರಜಾ ದಿನಗಳಲ್ಲೂಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು (ಆಡಳಿತ) ಆದೇಶದಲ್ಲಿ ತಿಳಿಸಿದ್ದಾರೆ.
ಉಪ ವಿಭಾಗಗಳಲ್ಲಿನ ನಗದು ಕೌಂಟರ್‌ಗಳನ್ನು ತೆರೆಯಬೇಕು
ಸರಕಾರಿ ರಜಾ ದಿನಗಳಾದ ಜೂ.26 (ಮೊಹರಂ), ಜೂ.27 (4ನೇ ಶನಿವಾರ), ಜೂ.28 (ಭಾನುವಾರ) ಹಾಗೂ ಜು.5ರಂದು (ಭಾನುವಾರ) ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ಆಪರೇಷನ್ಸ್, ಐಟಿ, ಗ್ರಾಹಕರ ಸಂಬಂಧ ಶಾಖೆಗಳೊಂದಿಗೆ ಕಾರ್ಯ ಮತ್ತು ಪಾಲನಾ ವೃತ್ತ, ವಿಭಾಗ, ಉಪ ವಿಭಾಗಗಳ ಅಧಿಕಾರಿಗಳು, ಘಟಕ ಮತ್ತು ಶಾಖಾ ಕಚೇರಿಗಳಲ್ಲಿನ ಸಹಾಯಕ ಎಂಜಿನಿಯರ್‌ಗಳು, ಕಿರಿಯ ಎಂಜಿನಿಯರ್‌ಗಳು ಕರ್ತವ್ಯ ನಿರ್ವಹಿಸಬೇಕು. ಜತೆಗೆ, ಉಪ ವಿಭಾಗಗಳಲ್ಲಿನ ನಗದು ಕೌಂಟರ್‌ಗಳನ್ನು ತೆರೆಯಬೇಕು. ಸರಕಾರಿ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಪರಿಹಾರ ರಜೆ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.


