BBMP
Loading ...

Protest

Greater Bengaluru News9 : ರಾಜ್ಯ ಸರ್ಕಾರದ ಉದಾಸೀನ ಧೋರಣೆ ಮತ್ತು ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಜನವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (ರಿ) ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ವಿದ್ಯುತ್ ಗುತ್ತಿಗೆದಾರರ ಉಳಿವಿಗಾಗಿ ಹೋರಾಟ’ ಎಂಬ ಬೃಹತ್ ಪ್ರತಿಭಟನೆಯನ್ನು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಹಮ್ಮಿಕೊಳ್ಳಲಾಗಿದ್ದು, ವೇದಿಕೆ ಸಿದ್ಧವಾಗಿದೆ.

ವಿದ್ಯುತ್​ ಇಲಾಖೆಯನ್ನು ಖಾಸಗೀಕರಣಗೊಳಿಸುವ ಜನವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕ ವಲಯ ಹಾಗೂ ವೃತ್ತಿಪರರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ದಶಕಗಳಿಂದ ಇಲಾಖೆಯ ನಂಬಿಕಸ್ಥ ಕಣ್ಣುಗಳಂತೆ ಕೆಲಸ ಮಾಡುತ್ತಾ ಬಂದಿರುವ ಸ್ಥಳೀಯ ವಿದ್ಯುತ್ ಗುತ್ತಿಗೆದಾರರನ್ನು ಕಡೆಗಣಿಸಿ, ಇಡೀ ಇಲಾಖೆಯನ್ನೇ ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಒಪ್ಪಿಸಲು ಸರ್ಕಾರ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸರ್ಕಾರದ ಈ ಹಠಮಾರಿ ಧೋರಣೆಯಿಂದಾಗಿ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದ್ದ ಗುತ್ತಿಗೆ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ.

ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ಈ ನಡೆಯಲ್ಲಿ ಯಾವುದೇ ಪಾರದರ್ಶಕತೆ ಕಾಣಿಸುತ್ತಿಲ್ಲ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರವೇ ಈ ರೀತಿ ಇಲಾಖೆಯನ್ನು ಖಾಸಗಿಯವರ ಪಾಲು ಮಾಡುತ್ತಿರುವುದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಮತ್ತು ಗುತ್ತಿಗೆದಾರರ ಹೊಟ್ಟೆ ಹೊಡೆಯುವ ಕೆಲಸವಾಗಿದೆ. ಕಷ್ಟಕಾಲದಲ್ಲಿ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಸ್ಥಳೀಯರನ್ನು ಮೂಲೆಗುಂಪು ಮಾಡಿ, ಖಾಸಗಿ ಕಂಪನಿಗಳಿಗೆ ಕೆಂಪು ಹಾಸು ಹಾಸುತ್ತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂದು ಗುತ್ತಿಗೆದಾರರ ಸಂಘವು ಖಾರವಾಗಿ ಪ್ರಶ್ನಿಸಿದೆ.

ಈ ತಾರತಮ್ಯ ಮತ್ತು ಅನ್ಯಾಯದ ವಿರುದ್ಧ ಈಗ ಹೋರಾಟದ ಕಿಡಿ ಹೊತ್ತಿಕೊಂಡಿದೆ. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (ರಿ) ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ವಿದ್ಯುತ್ ಗುತ್ತಿಗೆದಾರರ ಉಳಿವಿಗಾಗಿ ಹೋರಾಟ’ ಎಂಬ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಹೆಚ್.ವಿ. ಚಂದ್ರಬಾಬು ಸೇರಿದಂತೆ ಇಡೀ ಒಕ್ಕೂಟವು ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಸಾರಗಟ್ಟಿದ ಸಮರಕ್ಕೆ ಸಜ್ಜಾಗಿದೆ.

ಈ ನ್ಯಾಯಯುತ ಹಕ್ಕಿನ ಹೋರಾಟವು ಬರುವ ಜೂನ್ 22, 2026ರ ಸೋಮವಾರದಂದು ಬೆಳಗ್ಗೆ 10:00 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜರುಗಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯುತ್ ಗುತ್ತಿಗೆದಾರರು, ಕಟ್ಟಡ ಮಾಲೀಕರು ಮತ್ತು ಗ್ರಾಹಕರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಇನ್ನಾದರೂ ಸರ್ಕಾರ ತನ್ನ ಮೊಂಡಾಟವನ್ನು ಬಿಟ್ಟು ಗುತ್ತಿಗೆದಾರರ ಬೇಡಿಕೆಗಳಿಗೆ ಕಿವಿಗೊಡದಿದ್ದರೆ ಮುಂದಿನ ದಿನಗಳಲ್ಲಿ ಇಡೀ ವಿದ್ಯುತ್ ಕ್ಷೇತ್ರವೇ ಸ್ತಬ್ಧಗೊಳ್ಳುವ ಆಪಾಯ ಎದುರಾಗಲಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಈ ಬೃಹತ್​ ಪ್ರತಿಭಟನೆಯಲ್ಲಿ ಸಂಘದ ಎಲ್ಲಾ ಸದಸ್ಯರು, ಕೇಂದ್ರ ಸಮಿತಿ ಪದಾಧಿಕಾರಿಗಳು ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರುಗಳು, ವಿವಿಧ ಸಮಿತಿಯ ಛೇರನ್‌ಗಳು, ಎಲ್ಲಾ ಜಿಲ್ಲಾ ಸಮಿತಿ/ ತಾಲ್ಲೂಕು/ ಉಪಸಮಿತಿಯ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರುಗಳು, ವಿದ್ಯುತ್ ಗ್ರಾಹಕರು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮ ಈ ನ್ಯಾಯಯುತ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ವಿದ್ಯುತ್​ ಗುತ್ತಿಗೆದಾರರ ಸಂಘದ ಹೋರಾಟ ಸಮಿತಿಯ ಚೇರ್ಮನ್​ ವೈ.ಎಚ್​. ಆನಂದ್​ ಹಾಗೂ ರಾಜ್ಯ ಪ್ರಚಾರ ಸಮಿತಿ ಚೇರ್ಮನ್​ ಶಿವಕುಮಾರ್​ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *