Greater Bengaluru News9 : ರಾಜ್ಯದ ಜನರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಳೆಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದ್ದಾರೆ.
ತಮ್ಮ 2ನೇ ಕ್ಯಾಬಿನೆಟ್ ಸಭೆ ನಡೆಸಿದ ಸಿಎಂ, ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. 2026 ನೇ ಇಸವಿಯ ಮೇ 31 ರ ಒಳಗೆ ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ಸಂಪರ್ಕ ಹೊಂದಿದ್ದರೇ, ಅಂತಹ ಕಟ್ಟಡಗಳಿಗೆ ಆದೇಶ ಪ್ರಕಟವಾದ ದಿನದಿಂದ 15 ದಿನಗಳ ಒಳಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯುತ್ ಗುತ್ತಿಗೆದಾರರ ಸಂಘದ ಮನವಿಗೆ ಸ್ಪಂದನೆ
ಈ ಮೊದಲು ಮೇ 31ರವರೆಗ ಅರ್ಜಿ ಸಲ್ಲಿಸಿದವರಿಗೆ ಮಾತ್ರ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಳೆಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 15 ದಿನಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ.
ಏನೇನು ದಾಖಲೆ ಕೊಡಬೇಕು?
ಅರ್ಜಿ ಸಲ್ಲಿಸುವವರು ಫಲಾನುಭವಿಗಳ ಫೋಟೋ, ಕಟ್ಟಡದ ಫೋಟೋ ಹಾಗೂ ಜಿಪಿಎಸ್ ಲೊಕೆಷನ್ ಜೊತೆಗೆ ಅರ್ಜಿ ಸಲ್ಲಿಸಬೇಕು. 31-05-2026 ನೇ ಇಸವಿಯೊಳಗೆ ಪೂರ್ಣಗೊಂಡ ಕಟ್ಟಡಗಳಿಗೆ ಮಾತ್ರ ಈ ಅವಕಾಶ ಇರಲಿದೆ. ಹೊಸದಾಗಿ ತರಾತುರಿಯಲ್ಲಿ ಕಟ್ಟಡ ಕಟ್ಟೋರಿಗೆ ಈ ರಿಯಾಯಿತಿ ಇರೋದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ರೇಷ್ಮೆ ಹುಳು ಮನೆ, ಕೊಟ್ಟಿಗೆ, ಹೈನುಗಾರಿಕೆಗೆ ವಿನಾಯಿತಿ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರ ಕಚೇರಿ ಕಾರ್ಯ, ವ್ಯಾಪ್ತಿ ಮತ್ತು ವಿನ್ಯಾಸ ಬದಲಾವಣೆ ಮಾಡಲು, ನಿವೃತ್ತ ಅಧಿಕಾರಿಗಳ ಬಳಕೆ ಮಾಡಲು ಹಾಗೂ ಪ್ರತ್ಯೇಕವಾಗಿ ಕಾನೂನು ಸೆಲ್ ಮಾಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 200 ಬೆಡ್ ಆಸ್ಪತ್ರೆ ಮಾಡಲು 100 ಕೋಟಿ ರೂ. ವೆಚ್ಚ ಮಾಡಲು ಸಂಪುಟ ಅನುಮೋದನೆ ನೀಡಲಾಗಿದೆ.


