ದೊಡ್ಡಬಳ್ಳಾಪುರ: ವಿದ್ಯುತ್ ವಿತರಣಾ ವಲಯ ಖಾಸಗೀಕರಣ ಖಂಡಿಸಿ ಬೆಸ್ಕಾಂ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ‘ಬೆಸ್ಕಾಂ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ. ಈಗ ಏಕಾಏಕಿ ಖಾಸಗಿ ಕಂಪನಿಗಳು ವಿದ್ಯುತ್ ಸರಬರಾಜು ಕಂಪನಿಗಳ ಪರವಾನಗಿ ಕಸಿದುಕೊಂಡು ಸಂಪೂರ್ಣ ವ್ಯಾಪಾರೀಕರಣ ಮಾಡಲು ಹೊರಟಿದೆ. ವಿದ್ಯುತ್ ಸರಬರಾಜು ಖಾಸಗಿ ಕಂಪನಿಗಳ ಪಾಲಾದರೆ ಸಂಪೂರ್ಣ ವ್ಯಾವಹಾರಿಕವಾಗಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ’ ಎಂದರು.
ಬೆಸ್ಕಾಂ ಸಿಬ್ಬಂದಿ ಇಷ್ಟು ವರ್ಷ ಸಾರ್ವಜನಿಕ ಸೇವೆಯಲ್ಲಿ ಲಾಭ– ನಷ್ಟ ಲೆಕ್ಕಿಸದೆ ನಿರಂತರ ಸೇವೆ ಒದಗಿಸಿದೆ. ಆದರೆ ಈ ವಲಯಕ್ಕೂ ಈಗ ಖಾಸಗಿ ಕಂಪನಿಗಳು ಲಗ್ಗೆ ಇಟ್ಟಿವೆ. ಬೆಸ್ಕಾಂ ಖಾಸಗಿ ಕಂಪನಿಗಳ ಪಾಲಾದರೆ ಕೇವಲ ಹಣ ಗಳಿಸುವ ಉದ್ದೇಶದಿಂದ ಬರುವ ಕಂಪನಿಗಳು ಲಾಭಕ್ಕಾಗಿ ಸಾರ್ವಜನಿಕರಿಗೆ ಇಲ್ಲಸಲ್ಲದ ನೆಪಹೇಳಿ ತೊಂದರೆ ಕೊಡುತ್ತವೆ ಎಂದು ದೂರಿದರು.
ಕರುನಾಡು ರಾಷ್ಟ್ರೀಯ ಸೇನೆ ರಾಜ್ಯ ಅಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ ‘ರಾಜಕೀಯ ನಾಯಕರು ವಿಮಾನ, ರಸ್ತೆ, ಆಸ್ಪತ್ರೆ, ಶಾಲೆ ಹೀಗೆ ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ ಲೂಟಿ ಮಾಡಿದರು. ಈಗ ಬೆಸ್ಕಾಂ ಖಾಸಗೀಕರಣಕ್ಕೆ ಹೊರಟಿದ್ದಾರೆ. ವಿದ್ಯುತ್ ಕ್ಷೇತ್ರ ಖಾಸಗಿ ಪಾಲಾಗಲು ಬಿಡುವುದಿಲ್ಲ’ ಎಂದರು.
ಪ್ರತಿಭಟನೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ವಿನಯ ಕುಮಾರ್, ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಆನಂದ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ನಾಯಕ್, ಕೇಂದ್ರ ಕಾರ್ಯ ಸಮಿತಿ ಸದಸ್ಯ ಮುತ್ತುರಾಜ್, ಬೆಸ್ಕಾಂ ಸಿಬ್ಬಂದಿ ಹಾಜರಿದ್ದರು.


