BBMP
Loading ...

DK Shivakumar

Greater Bengaluru News9 : ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸರ್ಕಾರ ಕಟಿಬದ್ಧವಾಗಿದ್ದು, ಸಾರ್ವಜನಿಕರಿಂದ ಯಾರೇ ಲಂಚ ಕೇಳಿದರೂ ತಕ್ಷಣ ದೂರು ನೀಡಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪ್ರಮುಖ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ನೀಡಿರುವ ಪ್ರಮುಖ ಸೂಚನೆಗಳನ್ನು ಹಂಚಿಕೊಂಡರು.

ಪ್ರತಿ ಆಫೀಸ್‌ನಲ್ಲೂ ದೂರು ಸಂಖ್ಯೆಯ ಬೋರ್ಡ್: ರಾಜ್ಯದ ಪ್ರತಿ ತಾಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ದೊಡ್ಡದಾದ ಬೋರ್ಡ್‌ಗಳನ್ನು ಅಳವಡಿಸಿ, ಅದರಲ್ಲಿ ಸಹಾಯವಾಣಿ (ಫೋನ್ ನಂಬರ್) ಪ್ರಕಟಿಸಲಾಗುವುದು. ಯಾರಾದರೂ 10 ರೂಪಾಯಿ ಲಂಚ ಕೇಳಿದರೂ ಸಾರ್ವಜನಿಕರು ಆ ನಂಬರ್‌ಗೆ ಫೋನ್ ಮಾಡಬಹುದು. ಈ ಕರೆಗಳು ನೇರವಾಗಿ ಬೆಂಗಳೂರು ಹಾಗೂ ಸಂಬಂಧಪಟ್ಟ ಡಿಸಿ ಆಫೀಸ್‌ಗೆ ಕನೆಕ್ಟ್ ಆಗಲಿವೆ.

ಒತ್ತಡಕ್ಕೆ ಮಣಿಯಬೇಡಿ – ಸಿಎಂ, ಡಿಕೆಶಿ ನೇರ ಅಭಯ: “ನಾನೇ ಆಗಲಿ ಅಥವಾ ಯಾವುದೇ ಸಚಿವರು, ಶಾಸಕರು ಕಾನೂನು ಬಾಹಿರ ಕೆಲಸ ಮಾಡುವಂತೆ ಒತ್ತಡ ತಂದರೂ ಅಧಿಕಾರಿಗಳು ಅದಕ್ಕೆ ಮಣಿಯಬಾರದು. ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳು ನೇರವಾಗಿ ನನ್ನ ಸಂಪರ್ಕದಲ್ಲಿರಬಹುದು. ಧೈರ್ಯವಾಗಿ ವಿಷಯ ತಿಳಿಸಿ, ತಪ್ಪು ಕೆಲಸಗಳಿಗೆ ಆಸ್ಪದ ನೀಡಬೇಡಿ” ಎಂದು ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ.

ವರ್ಗಾವಣೆಯಲ್ಲಿ ಸಾಮಾಜಿಕ ನ್ಯಾಯ: ಪೋಸ್ಟಿಂಗ್‌ಗಳ ವಿಷಯದಲ್ಲಿ ಯಾವುದೇ ಒಂದು ಜಾತಿಗೆ ಆದ್ಯತೆ ನೀಡುವುದಿಲ್ಲ. ಡಿಸಿ ಒಂದು ಜಾತಿಯವರಾಗಿದ್ದರೆ, ಎಸ್‌ಪಿ, ಡಿಎಫ್‌ಓ ಬೇರೆ ಜಾತಿಗೆ ಸೇರಿರುತ್ತಾರೆ. ಆಡಳಿತದಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗುವುದು ಎಂದರು.

ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ಕಡ್ಡಾಯ: ಜನರು ತಮ್ಮ ಸಮಸ್ಯೆಗಳಿಗಾಗಿ ಬೆಂಗಳೂರು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಾಲೂಕಿನಲ್ಲಿ ಹಾಗೂ ಶಾಸಕರು ಹೋಬಳಿ/ಪಂಚಾಯತಿ ಮಟ್ಟದಲ್ಲಿ ಕಡ್ಡಾಯವಾಗಿ ‘ಜನಸಂಪರ್ಕ ಸಭೆ’ ನಡೆಸಬೇಕು. ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ. ತಾವು ಕೂಡ ಪ್ರತಿ ಜಿಲ್ಲೆಗೆ ಪ್ರವಾಸ ಕೈಗೊಂಡು ತಾಲೂಕು ಮಟ್ಟದಲ್ಲಿ ವಾಸ್ತವ್ಯ ಹೂಡುವುದಾಗಿ ಡಿಕೆಶಿ ತಿಳಿಸಿದರು.

ಹಾಸ್ಟೆಲ್‌ಗಳಿಗೆ ಭೇಟಿ, ಗುಣಮಟ್ಟ ಪರಿಶೀಲನೆ: ಅಧಿಕಾರಿಗಳು ಕಡ್ಡಾಯವಾಗಿ ಸರ್ಕಾರಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಊಟದ ಗುಣಮಟ್ಟವನ್ನು ಸ್ವತಃ ಟೇಸ್ಟ್ ಮಾಡಿ ಪರಿಶೀಲಿಸಬೇಕು ಎಂದು ಆದೇಶಿಸಿದ್ದಾರೆ.

ಮಳೆ ಕೊರತೆ – ಮುಂಜಾಗ್ರತೆ: ರಾಜ್ಯದಲ್ಲಿ ಪ್ರಸ್ತುತ ಶೇ. 30 ಕ್ಕೂ ಹೆಚ್ಚು ಮಳೆ ಕೊರತೆಯಾಗಿದ್ದು, ಬಿತ್ತನೆ ಕಾರ್ಯ ಇನ್ನೂ ಚುರುಕುಗೊಂಡಿಲ್ಲ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *