BBMP
Loading ...

High Court

Greater Bengaluru News9 : ಸರ್ಕಾರಿ ಇಲಾಖೆಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿತ ವ್ಯಕ್ತಿ ಸರ್ಕಾರಿ ನೌಕರನಲ್ಲ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿಲ್ಲ ಅಥವಾ ಲಂಚದ ಹಣ ವಶಕ್ಕೆ ಸಿಕ್ಕಿಲ್ಲ ಎಂಬ ಕಾರಣಗಳನ್ನು ಮುಂದಿಟ್ಟು ತನಿಖೆ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಧಿಕಾರಿಗಳಿಗೆ ಲಂಚ ತಲುಪಿಸುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.

ಬೆಂಗಳೂರು ಬಸವೇಶ್ವರನಗರದ ಕೆ.ಎಸ್. ಗಂಗಾಧರಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಧಿಕಾರಿಗಳಿಗೆ ನೀಡಲು ಲಂಚದ ಹಣ ಸ್ವೀಕರಿಸಿ ಮತ್ತೊಬ್ಬರಿಗೆ ತಲುಪಿಸಲು ಸೂಚನೆ ನೀಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಗಂಗಾಧರಯ್ಯ ಮನವಿ ಮಾಡಿದ್ದರು. ಆದರೆ ಪ್ರಕರಣದಲ್ಲಿ ಸಾಕಷ್ಟು ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 8, 9 ಮತ್ತು 10ರ ಅನ್ವಯ ಸರ್ಕಾರಿ ಅಧಿಕಾರಿಗೆ ಲಂಚ ನೀಡುವ ವ್ಯಕ್ತಿ, ವಾಣಿಜ್ಯ ಸಂಸ್ಥೆ ಹಾಗೂ ಆ ಸಂಸ್ಥೆಯ ಉಸ್ತುವಾರಿ ವ್ಯಕ್ತಿಯನ್ನೂ ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಅರ್ಜಿದಾರರು ‘ದಿ ಟ್ರಾನ್ಸ್‌ಪೋರ್ಟ್’ ಎಂಬ ಕಂಪನಿ ನಡೆಸುತ್ತಿದ್ದು, ಲಂಚದ ಹಣದ ಅಕ್ರಮ ವಹಿವಾಟಿನಲ್ಲಿ ಅವರ ಪಾತ್ರವಿರುವುದು ಪ್ರಾಥಮಿಕ ದಾಖಲೆಗಳಿಂದ ತಿಳಿದುಬರುತ್ತದೆ ಎಂದು ಪೀಠ ಹೇಳಿದೆ.

ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದ ಮನೋಜ್ ಎಂಬಾತ ನೀಡಿದ ಹೇಳಿಕೆಯಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರದ ಜಾಲ ಆಳವಾಗಿ ಬೇರೂರಿರುವುದು ಹಾಗೂ ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿರುವುದನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಅಲ್ಲದೆ, ಅರ್ಜಿದಾರರೇ ಉಸ್ಮಾನ್ ಎಂಬವರಿಂದ ಹಣ ಸಂಗ್ರಹಿಸಲು ಸೂಚನೆ ನೀಡಿದ್ದರೆಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆ, “ಸರ್ಕಾರಿ ಸೇವಕನಲ್ಲ ಅಥವಾ ನೇರವಾಗಿ ಸಿಕ್ಕಿಬಿದ್ದಿಲ್ಲ ಎಂಬ ಕಾರಣಕ್ಕೆ ಪ್ರಕರಣ ರದ್ದುಪಡಿಸಲಾಗದು” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ದೆಹಲಿ–ಬೆಂಗಳೂರು ಮಾರ್ಗದಲ್ಲಿ ಪಾನ್ ಮಸಾಲಾ, ಕಬ್ಬಿಣ, ಉಕ್ಕು ಹಾಗೂ ಸ್ಕ್ರಾಪ್ ಸಾಗಣೆ ಜಾಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಕೆಲ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರದ ಖಜಾನೆಗೆ ಭಾರಿ ನಷ್ಟ ಉಂಟುಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಮೊದಲ ಆರೋಪಿ ವಾಣಿಜ್ಯ ತೆರಿಗೆ ಅಧಿಕಾರಿ ಎಂ.ಆರ್. ನಿಜಾನಂದಮೂರ್ತಿ ಹಾಗೂ ಇತರರು ಸೇರಿ ಗಂಗಾಧರಯ್ಯ ಮೂಲಕ ಹಣ ಸಂಗ್ರಹಿಸುತ್ತಿರುವ ಮಾಹಿತಿ ಲಭ್ಯವಾಗಿತ್ತು.

2025ರ ಏಪ್ರಿಲ್ 23ರಂದು ಗಂಗಾಧರಯ್ಯ ಸೂಚನೆಯ ಮೇರೆಗೆ ಮನೋಜ್ ವಿವಿಧ ಕಂಪನಿಗಳಿಂದ ₹20 ಲಕ್ಷ ಸಂಗ್ರಹಿಸಿ ಅಧಿಕಾರಿಗಳಿಗೆ ತಲುಪಿಸಲು ಮುಂದಾಗಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮನೋಜ್ ಹಾಗೂ ನಿಜಾನಂದಮೂರ್ತಿಯನ್ನು ಬಂಧಿಸಿದ್ದರು.

ನಂತರ ನಿಜಾನಂದಮೂರ್ತಿ ಮೊಬೈಲ್ ಪರಿಶೀಲನೆ ವೇಳೆ ಗಂಗಾಧರಯ್ಯ ಜೊತೆಗಿನ ಸಂಭಾಷಣೆ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಎರಡನೇ ಆರೋಪಿಯಾಗಿ ಸೇರಿಸಲಾಗಿತ್ತು.

ಈ ಕ್ರಮ ಪ್ರಶ್ನಿಸಿ ಗಂಗಾಧರಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರೂ, ತನಿಖೆಗೆ ಸಾಕಷ್ಟು ಆಧಾರಗಳಿರುವುದರಿಂದ ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅರ್ಜಿಯನ್ನು ವಜಾಗೊಳಿಸಿದೆ.

Leave a Reply

Your email address will not be published. Required fields are marked *