Greater Bengaluru News9: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line) ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಹತ್ವದ ಮಾಹಿತಿ ನೀಡಿದೆ.
ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೇ 17ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನೇರಳೆ ಮಾರ್ಗದ ಕೆಲವು ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜ್) ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು BMRCL ತಿಳಿಸಿದೆ.
ಈ ಅವಧಿಯಲ್ಲಿ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ. ಆದರೆ ಬೆಳಗ್ಗೆ 7ರಿಂದ 9 ಗಂಟೆಯ ನಡುವೆ ಕೆಲವು ಇತರೆ ಭಾಗಗಳಲ್ಲಿ ಮೆಟ್ರೋ ಸೇವೆ ಸಾಮಾನ್ಯ ವೇಳಾಪಟ್ಟಿಯಂತೆ ಮುಂದುವರಿಯಲಿದೆ.
ಬೆಳಗ್ಗೆ 9 ಗಂಟೆಯ ನಂತರ ಹೊಸಹಳ್ಳಿ–ಕಬ್ಬನ್ ಪಾರ್ಕ್ ನಡುವಿನ ಸಂಚಾರ ಸೇರಿದಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಎಂದಿನಂತೆ ಪುನಃ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ತಾತ್ಕಾಲಿಕ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ BMRCL ಮನವಿ ಮಾಡಿದೆ.


