Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಲು ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಮೂರು ತಿಂಗಳ ಕಾಲಾವಕಾಶ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ಜನಗಣತಿ ಕಾರ್ಯ ಹಾಗೂ ಭಾರತೀಯ ಚುನಾವಣಾ ಆಯೋಗ ನಡೆಸಲಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಆಡಳಿತಾತ್ಮಕ ಸಿಬ್ಬಂದಿ ನಿರತರಾಗಲಿರುವ ಕಾರಣದಿಂದ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಯೋಗ ತನ್ನ ಮಧ್ಯಂತರ ಅರ್ಜಿಯಲ್ಲಿ ತಿಳಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಜನವರಿ 12ರಂದು ನಡೆಸಿದ್ದ ಸುಪ್ರೀಂ ಕೋರ್ಟ್, 2026ರ ಜೂನ್ ಅಂತ್ಯದೊಳಗೆ ಐದು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಕೊನೆಯ ಅವಕಾಶ ನೀಡಿತ್ತು. ಜೊತೆಗೆ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ಸಂಬಂಧಿತ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು 2026ರ ಏಪ್ರಿಲ್ 20ಕ್ಕೆ ಮುಂದೂಡಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರವು ಮಾರ್ಚ್ 7ರಂದು ಐದು ಪಾಲಿಕೆಗಳ ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿತ್ತು. ಬಳಿಕ ಏಪ್ರಿಲ್ 18ರಂದು ರಾಜ್ಯ ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಇದರ ನಡುವೆಯೇ, ಏಪ್ರಿಲ್ 6ರಂದು ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಜನಗಣತಿ ಚಟುವಟಿಕೆಗಳು ಏಪ್ರಿಲ್ 16ರಿಂದ ಆರಂಭವಾಗಿ ಮೇ 15ರವರೆಗೆ ನಡೆಯಲಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಚುನಾವಣೆಯನ್ನು ಸೆಪ್ಟೆಂಬರ್ 30ರವರೆಗೆ ಮುಂದೂಡಲು ಮನವಿ ಸಲ್ಲಿಸಿದ್ದರು.
ಭಾರತೀಯ ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ ಆರಂಭಿಸಲಿರುವುದರಿಂದ ಜಿಬಿಎ ವ್ಯಾಪ್ತಿಯ ಆಡಳಿತಾತ್ಮಕ ಸಿಬ್ಬಂದಿಯನ್ನು ಆ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಇದರಿಂದ ಪಾಲಿಕೆ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿ ಲಭ್ಯವಾಗುವುದಿಲ್ಲ ಎಂದು ಜಿಬಿಎ ಆಯುಕ್ತರು ವಿವರಿಸಿರುವುದಾಗಿ ರಾಜ್ಯ ಚುನಾವಣಾ ಆಯೋಗ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ಏಪ್ರಿಲ್ 8ರಂದು ರಾಜ್ಯ ಸರ್ಕಾರದ ಗಮನಕ್ಕೂ ತರಲಾಗಿತ್ತು. ನಂತರ ಏಪ್ರಿಲ್ 15ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯೂ ಜಿಬಿಎ ಆಯುಕ್ತರ ಪತ್ರ ಉಲ್ಲೇಖಿಸಿ, ಚುನಾವಣೆ ಮುಂದೂಡಿಕೆಗೆ ಬೆಂಬಲ ಸೂಚಿಸಿದ್ದರು.
ಚುನಾವಣಾ ಆಯೋಗವು ನ್ಯಾಯಾಲಯದ ಗಡುವಿನಂತೆ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ, ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಸಮಸ್ಯೆಗಳು ವಾಸ್ತವಿಕವಾಗಿವೆ. ಜನಗಣತಿ ಹಾಗೂ ಎಸ್ಐಆರ್ ಪ್ರಕ್ರಿಯೆಗಳ ಕಾರಣದಿಂದ ಚುನಾವಣಾ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ ಎಂದು ಆಯೋಗ ತನ್ನ ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ.
ಇದೇ ವಿಚಾರವಾಗಿ ಮೇ 8ರಂದು ಜಿಬಿಎ ಆಯುಕ್ತರೊಂದಿಗೆ ನಡೆದ ಸಭೆಯಲ್ಲೂ ಚುನಾವಣೆಗೆ ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಐದು ಮಹಾನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಕೋರಿದೆ.


